ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತರಬೇತಿ ಪಡೆದ ಅನೇಕ ಶಿಕ್ಷಕರನ್ನು ಕೈ ಬಿಟ್ಟು ತರಬೇತಿ ಪಡೆಯದ ಹಲವು ಶಿಕ್ಷಕರನ್ನು ಸಮೀಕ್ಷೆಗೆ ತೆರಳುವಂತೆ ಆದೇಶ ಮಾಡಿದ್ದು, ಇದು ಗೊಂದಲವನ್ನುಂಟು ಮಾಡಿದೆ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಆರೋಪಿಸಿ ಬುಧವಾರ ತಹಶಿಲ್ದಾರ ರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪೂರ್ವದಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜನೆ ಮಾಡಬೇಕು. ಒಂದು ವೇಳೆ ಶಿಕ್ಷಕರು ಕಡಿಮೆ ಬಿದ್ದರೆ ಉಳಿದ ಶಿಕ್ಷಕರನ್ನು ಸೂಕ್ತ ತರಬೇತಿ ನೀಡಿ ಸಮೀಕ್ಷೆಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ನಿರೀಕ್ಷಕ ಎಮ್.ಎ.ಅತ್ತಾರ ಮನವಿ ಪತ್ರ ಸ್ವೀಕರಿಸಿದರು.
ಈ ವೇಳೆ ತರಬೇತಿಗೆ ನಿಯೋಜಿತ ಶಿಕ್ಷಕರಾದ ಶ್ರೀಕಾಂತ ಜೋಶಿ, ಸಿ.ಎಸ್.ಪಾಟೀಲ, ಸಿಧ್ಧಾರಾಮ ಮಳ್ಳಿ, ಎಸ್.ಎಮ್.ಜಮಾದಾರ, ಕವಿತಾ ಪಶುಪತಿಮಠ, ರೂಪಾ ಪಾಟೀಲ, ಅಶೋಕ ರಾಠೋಡ, ಮೇಘು ನಾಯಕ ಮುಂತಾದವರು ಉಪಸ್ಥಿತರಿದ್ದರು.

