ಇಂಡಿಯಲ್ಲಿ ನಡೆದ ಭೀಮಾ ಪ್ರವಾಹ ಮಳೆ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಆನಂದ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕು ಭೀಮಾ ಪ್ರವಾಹದ ಭೀತಿಯಲ್ಲಿದ್ದು ಮತ್ತು ಮಳೆ ಹೆಚ್ಚಾಗುತ್ತಿದ್ದು ಅಧಿಕಾರಿಗಳು, ಸಿಬ್ಬಂದಿ,ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವದು ಕಡ್ಡಾಯ ಎಂದು ವಿಜಯಪುರ ಜಿಲ್ಲಾಧಿಕಾರಿ ಕೆ. ಆನಂದ ಹೇಳಿದರು.
ಪಟ್ಟಣದ ತಾ.ಪಂ ಸಬಾಭವನದಲ್ಲಿ ಭೀಮಾ ಪ್ರವಾಹ ಸಾಧ್ಯತೆ ಕುರಿತು ಮತ್ತು ಮಳೆ ಹೆಚ್ಚಾದ ಕುರಿತು ನಡೆದ ಅಧಿಕಾರಿಗಳ ಮತ್ತು ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ಯಾರೂ ಮೋಬೈಲ್ ಸ್ವಿಚ್ ಆಫ್ ಮಾಡಬಾರದು. ಭೀಮಾ ನದಿಗೆ ನೀರು ಬಿಟ್ಟರೆ ಜನರಿಗೆ ತೊಂದರೆ ಯಾದರೆ ಕೂಡಲೇ ಸ್ಪಂದಿಸಬೇಕು. ಮನೆ ಬಿದ್ದವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಬೇಕು. ಈಗಾಗಲೇ ಕಾಳಜಿ ಕೇಂದ್ರ ತೆಗೆಯಲು ತಿಳಿಸಲಾಗಿದ್ದು ಸ್ಥಳಿಯ ಮುಖಂಡರಿಂದ ಮಾಹಿತಿ ಪಡೆದು ಅದಕ್ಕೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಈ ವರ್ಷ ಮಳೆ ಹೆಚ್ಚು ಆಗುತ್ತಿದೆ. ಅದಲ್ಲದೆ ಮಹಾರಾಷ್ಟ್ರದವರು ಭೀಮಾ ಮತ್ತು ಸೀನಾ ನದಿಯಿಂದ ನೀರು ಬಿಡುತ್ತಿದ್ದು ಸೊನ್ನ ಬ್ಯಾರೇಜಿನಲ್ಲಿ ಪರಿಸ್ಥಿತಿ ನಿಯಂತ್ರಿಸಿ ಇಂಡಿ ತಾಲೂಕು ಸೇರಿದಂತೆ ಚಡಚಣ, ಆಲಮೇಲ ತಾಲೂಕಿನಲ್ಲಿ ಪ್ರವಾಹ ತೊಂದರೆ ಯಾಗದಂತೆ ನೋಡಬೇಕು ಎಂದರು.
ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ನಿರ್ದೇರ್ಶಕ ಚಂದ್ರಕಾಂತ ಪವಾರ ಮತ್ತು ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ಈ ವರ್ಷ ಶೇ ೭೦ ರಷ್ಟು ಮಳೆ ಹೆಚ್ಚಾಗಿದೆ. ಒಟ್ಟಾರೆ ಸಪ್ಟೆಂಬರ್ ದಲ್ಲಿ ೧೦೪ ಮಿಮಿ ಆಗಬೇಕಾಗಿದ್ದು ಈಗಲೇ ೧೯೫ ಮಿಮಿ ಮಳೆಯಾಗಿದೆ. ಇತ್ತೀಚಿನ ಏಳು ದಿನ ಮಳೆ ಹೆಚ್ಚು ಆಗಿದೆ. ತಾಲೂಕಿನಲ್ಲಿ ಒಂದು ಲಕ್ಷ ಹನ್ನೊಂದು ಸಾವಿರ ಪ್ರದೇಶ ಬಿತ್ತನೆ ಇದ್ದು ಬೆಳೆ ಹಾನಿ ಕುರಿತು ಸಮೀಕ್ಷೆ ಪ್ರಗತಿಯಲ್ಲಿದ್ದು ವರದಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವದು ಎಂದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಮಳೆ ಹೆಚ್ಚಾಗಿ ತರಕಾರಿ ಮತ್ತು ಉಳ್ಳಾಗಡ್ಡಿ ಸಂಪೂರ್ಣ ಹಾಳಾಗಿದೆ.
ದ್ರಾಕ್ಷಿ, ನಿಂಬೆ, ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಹಾನಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಸೊನ್ನ ಬ್ಯಾರೇಜಿನ ೨೫ ಗೇಟುಗಳನ್ನು ಶಾಸಕರ ಸೂಚನೆಯ ಮೇರೆಗೆ ತೆಗೆಯಲಾಗಿದೆ. ಇದರಿಂದ ಇಂಡಿ ತಾಲೂಕಿನಲ್ಲಿ ಹಿನ್ನಿರಿನಿಂದ ರೈತರ ಜಮೀನುಗಳಿಗೆ ಆಗಬಹುದಾದ ಅನಾಹುತಗಳನ್ನು ನೀರು ನಿಲ್ಲುವುದನ್ನು ತಪ್ಪಿಸಲಾಗಿದೆ. ಶಾಸಕರು ಸರಕಾರದ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೆ.ಎನ್.ಎನ್ ಎಲ್ ಮತ್ತು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಸರಕಾರದಿಂದ ಪತ್ರದ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿರುತ್ತಾರೆ. ವಿಜಯಪುರ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು ಮತ್ತು ಮಹಾರಾಷ್ಟ್ರ ಉಜನಿ ಹಾಗೂ ಸೀನಾ ನದಿಗಳ ನೀರು ಬಿಡುವ ಅಧಿಕಾರಿಗಳ ಜೊತೆ ಸಮನ್ವಯ ಸಾದಿಸಿ ದಿನದ ೨೪ ಗಂಟೆ ಸತತ ಪ್ರತಿ ಘಂಟೆಗೆ ಪ್ರವಾಹದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಲೋಕೊಪಯೋಗಿ ಇಲಾಖೆಯ ದಯಾನಂದ ಮಠ, ಹೆಸ್ಕಾಂ ನ ಎಸ್.ಆರ್.ಮೆಂಡೆದಾರ, ಆರೋಗ್ಯ ಇಲಾಖೆಯ ಡಾ|| ರಾಜೇಶ ಕೋಳೆಕರ, ಪಂಚಾಯತ ರಾಜ, ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಮಾತನಾಡಿದರು.
ವೇದಿಕೆಯ ಮೇಲೆ ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ , ಇಒ ಭೀಮಾಶಂಕರ ಕನ್ನೂರ ಡಿ.ಎಸ್.ಪಿ ಜಗದೀಶ ಎಚ್.ಎಸ್ ಇದ್ದರು.

