ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮುಸ್ಲಿಂ ಸ್ಮಶಾನಭೂಮಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿ ಅಡಿ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿ ಅಂಜುಮನ್ ಎ ಇಸ್ಲಾಮ್ ಕಮಿಟಿಯಿಂದ ಮುಖ್ಯಾಧಿಕಾರಿ ಅಪ್ರೋಜ್ ಪಟೇಲ ಹಾಗೂ ಉಪಾಧ್ಯಕ್ಷ ರಮೇಶ ಮಸಬಿನಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ಅಂಜುಮನ್ ಎ ಇಸ್ಲಾಂ ಕಮಿಟಿಯ ಸದಸ್ಯರು ಸ್ಮಶಾನ ಭೂಮಿ ಕುರಿತು ಮುಖ್ಯಾಧಿಕಾರಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಇಸ್ಲಾಮ್ ಕಮಿಟಿ ಅಧ್ಯಕ್ಷ ಮೈಬೂಬ್‌ಸಾಬ್ ಹುಂಡೇಕಾರ ಮಾತನಾಡಿ, ಪಟ್ಟಣದ ೧೫ ಸಾವಿರಕ್ಕಿಂತ ಹೆಚ್ಚಿನ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿಂತೆ ಒಂದೇ ಸ್ಮಶಾನ ಭೂಮಿಯಿದೆ. ಈ ಸ್ಮಶಾನ ಭೂಮಿಗೆ ೪ ದಿಕ್ಕುಗಳಲ್ಲಿ ರಕ್ಷಣೆಯಿಲ್ಲದೇ ಹಾಳಾಗುತ್ತಿದೆ. ಆದ್ದರಿಂದ ಇದರ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಪಂಚಾಯಿತಿಯಿಂದ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷ ರಮೇಶ, ಈ ಬಾರಿ ಜರುಗುವ ಸಭೆಯಲ್ಲಿ ಇದರ ಕುರಿತು ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಕಮಿಟಿ ಉಪಾಧ್ಯಕ್ಷ ಎಂ.ಎಚ್.ಪಾನಪರೋಶ, ಹೈದರಸಾಬ್ ಮುಲ್ಲಾ, ಸಾತುಸೈಯದ್ ಮರೋಳ, ಮುನೀರ್‌ಅಹ್ಮದ್ ಮಳಖೇಡ, ಮಹ್ಮದ್ ಇಕ್ಬಾಲ್ ಬಿಜಾಪೂರ, ಬಂದೇನವಾಜ್ ಬಡೇಗರ, ಯೂನೂಸ್ ಲಾಳಸಂಗಿ, ಯಾಕುಬ್ ನದಾಫ್, ಮೌಲಾಸಾಬ್ ನದಾಫ್, ಇಬ್ರಾಹಿಂ ಆಳಂದ ಇದ್ದರು.

