ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಸಾರಸ್ವತ ಲೋಕದ ಮಹಾನ್ ದಿಗ್ಗಜ ಡಾ.ಎಸ್.ಎಲ್. ಭೈರಪ್ಪ ಅವರ ಅಕಾಲಿಕ ನಿಧನಕ್ಕೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಸಮಸ್ತ ಮುಖಂಡರು ಹಾಗೂ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಶೋಕ ಸಂದೇಶ ನೀಡಿರುವ ಸಂಸದ ರಮೇಶ ಜಿಗಜಿಣಗಿ ಅವರು, ಡಾ.ಎಸ್.ಎಲ್. ಭೈರಪ್ಪ ಅವರು ದೇಶ ಕಂಡ ಮಹಾನ್ ಸಾಹಿತ್ಯ ದಿಗ್ಗಜ, ಅವರ ಅಗಲಿಕೆಯಿಂದ ಇಡೀ ಸಾರಸ್ವತ ಲೋಕಕ್ಕೆ ಹಾನಿಯಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾದಂಬರಿಗಳನ್ನು ನೀಡಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಡಾ.ಎಸ್.ಎಲ್. ಭೈರಪ್ಪ ಸಾಹಿತ್ಯದ ಜೊತೆಗೆ ಭವ್ಯ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಪ್ರತಿಪಾದಿಸಿದ ಮಹಾನ್ ಚೇತನ. ಅವರ ಅನೇಕ ಕಾದಂಬರಿಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿವೆ. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶೋಕ ಸಂದೇಶ ನೀಡಿದ್ದು, ಡಾ.ಎಸ್.ಎಲ್. ಭೈರಪ್ಪ ಶ್ರೇಷ್ಠ ಸಾಹಿತಿ, ಚಿಂತಕರಲ್ಲಿ ಒಬ್ಬರಾಗಿದ್ದರು, ಒಬ್ಬ ಶ್ರೇಷ್ಠ ಚಿಂತಕ, ವಿದ್ವತಪೂರ್ಣ ಚೇತನವನ್ನು ನಾಡು ಕಳೆದುಕೊಂಡು ಬಡವಾಗಿದೆ, ಗೃಹಭಂಗ, ಆವರಣ, ಅನ್ವೇಷಣ ಹೀಗೆ ಅನೇಕ ಕೊಡುಗೆಗಳನ್ನು ನಾಡಿಗೆ ಅರ್ಪಿಸಿದ್ದ ಡಾ.ಎಸ್.ಎಲ್. ಭೈರಪ್ಪ ಅವರ ಸಾಹಿತ್ಯ ಕೊಡುಗೆ ಅಜರಾಮರ ಎಂದು ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಸಂತಾಪ ವ್ಯಕ್ತಪಡಿಸಿ, ಗೃಹಭಂಗ, ಆವರಣ, ವಂಶವೃಕ್ಷ ಹೀಗೆ ಡಾ.ಎಸ್.ಎಲ್. ಭೈರಪ್ಪ ಅವರ ಸಾಹಿತ್ಯ ಸೇವೆಯನ್ನು ವಿವರಿಸಲು ದಿನಗಳೇ ಬೇಕಾಗುತ್ತವೆ, ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಒಬ್ಬ ಶ್ರೇಷ್ಠ ಸಾಹಿತ್ಯ ಹಾಗೂ ಚಿಂತಕನನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.
ಶೋಕ ಸಂದೇಶ ನೀಡಿ, ನಾಡಿನ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದ ಡಾ.ಎಸ್.ಎಲ್. ಭೈರಪ್ಪ ಗುಜರಾತ್ ಸೇರಿದಂತೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಜ್ಞಾನ ಸುಧೆಯನ್ನು ಉಣಬಡಿಸಿದ ಮಹಾನ್ ವ್ಯಕ್ತಿ, ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಡಾ.ಎಸ್.ಎಲ್. ಭೈರಪ್ಪ ಸರಸ್ವತಿಯ ವರಪುತ್ರ, ಅವರ ಸಾಹಿತ್ಯಿಕ ಕೃತಿ, ಸಾಹಿತ್ಯಿಕ ಸೇವೆ ಸದಾ ಅಜರಾಮರ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಸಂತಾಪ ವ್ಯಕ್ತಪಡಿಸಿ, ಪ್ರತಿಭೆಗೆ ಇನ್ನೊಂದು ಹೆಸರಾಗಿದ್ದ ಡಾ.ಎಸ್.ಎಲ್. ಭೈರಪ್ಪ ಸತ್ಯವನ್ನು ತಮ್ಮ ಸಾಹಿತ್ಯದಲ್ಲಿ ಪ್ರತಿಪಾದಿಸಿದವರು, ಸತ್ಯವೇ ಸಾಹಿತ್ಯವಾಗಿಸಿದ ಡಾ.ಎಸ್.ಎಲ್. ಭೈರಪ್ಪ ಅವರು ನಾಡಿಗೆ ಹಾಗೂ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ, ನಾಡು ಒಬ್ಬ ಶ್ರೇಷ್ಠ ಸಾಹಿತಿ, ಸಂಸ್ಕೃತಿಯ ಆರಾಧಕನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

