ಮಹಿಳಾ ವಿವಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ | ಡಾ.ಜಿ.ವೆಂಕಟೇಶ ಕುಮಾರ್ ಕಿವಿಮಾತು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳೆಯರು ಸಿದ್ಧ ಮಾದರಿಯಿಂದ ಹೊರಬನ್ನಿ. ನಿಮ್ಮನ್ನು ನೀವು ಅರಿತುಕೊಂಡು ವೃತ್ತಿಯಲ್ಲಿ ತೊಡಗಿ ಉನ್ನತ ಸ್ಥಾನ ಅಲಂಕರಿಸಿ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವೆಂಕಟೇಶ ಕುಮಾರ್ ಉದ್ಯೋಗಸ್ಥ ಮಹಿಳೆಯರಿಗೆ ಕಿವಿಮಾತು ಹೇಳಿದರು.
ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ, ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಹಿಳಾ ವಿವಿಯ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಹಿಳೆಯರು ಸಿದ್ಧಮಾದರಿ ಪಾತ್ರಗಳಿಂದ ಹೊರಬರುತ್ತಿದ್ದಾರೆ. ದುಡಿಮೆ ವಲಯಕ್ಕೆ ಹೆಜ್ಜೆ ಇರಿಸಿ ವೃತ್ತಿಪರ ಮಹಿಳೆಯರು ಆಗುತ್ತಿರುವುದು ಸಂತೋಷ. ಆದರೆ ಕೇವಲ ದುಡಿಮೆಯ ವಲಯದಲ್ಲಿ ಗೋಚರಿಸಿದರೆ ಸಾಲದು. ವೃತ್ತಿಯಲ್ಲಿ ಉನ್ನತ ಸ್ಥಾನಗಳನ್ನು ಹೊಂದಬೇಕು. ವೃತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಸ್ವಿಚ್ ಆನ್ ಸ್ವಿಚ್ ಆಫ್ ಪರಿಕಲ್ಪನೆ ಅಳವಡಿಸಿಕೊಳ್ಳಬೇಕು. ಮನೆಯಲ್ಲಿದ್ದಾಗ ಮನೆ ಕೆಲಸಗಳ ಬಗ್ಗೆ, ವೃತ್ತಿ ಸ್ಥಳದಲ್ಲಿ ವೃತ್ತಿಯ ಕುರಿತು ಸ್ವಿಚ್ ಆನ್ ಆಗಬೇಕು. ಒತ್ತಡಗಳನ್ನು ಸಕಾರಾತ್ಮಕವಾಗಿ ನೋಡಿದಾಗ ಮನಸ್ಸಿಗೆ ಕಹಿ ಆಗದು ಎಂದು ಸ್ಪೂರ್ತಿ ತುಂಬಿದರು.
ಧಾರವಾಡ ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕಿ ಡಾ.ವಿಜಯ ಲಕ್ಷ್ಮೀ ಅಮ್ಮಿನಭಾವಿ ಮಾತನಾಡಿ, ಕೆಲಸವನ್ನು ಸಂತಸದಿಂದ ಅನುಭವಿಸಿದಾಗ ಒತ್ತಡ ಅನಿಸದು. ವೃತ್ತಿಪರರಾಗಬೇಕಾದರೆ ಮನೆ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ. ಮನಸ್ಸನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಿ. ಆಗ ಮನಸ್ಸು ಚಿಮ್ಮುಹಲಗೆಯಂತೆ ಕೆಲಸ ಮಾಡುತ್ತದೆ ಎಂದು ಭರವಸೆ ತುಂಬಿದರು.
ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವಾಯ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಇಂದು ಯಾವುದೇ ವಲಯಕ್ಕೆ ಪ್ರವೇಶ ಪಡೆಯಬಹುದು. ಆದರೂ, ಸಿದ್ಧಮಾದರಿ ಪಾತ್ರಗಳಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕುಟುಂಬವೂ ಸಹಕಾರ ನೀಡಬೇಕು. ಕೌಟುಂಬಿಕ ಚೌಕಟ್ಟಿನಿಂದ ಹೊರ ಬಂದು ಕೆಲಸ ಮಾಡುವಾಗ ಕುಟುಂಬ ಮತ್ತು ಸಮಾಜ ಎರಡರಲ್ಲೂ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಡಾ.ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಡಾ.ಸರೋಜಾ ಸಂತಿ ಪರಿಚಯಿಸಿದರು. ಡಾ.ರಜಿಯಾ ನದಾಫ್ ವಂದಿಸಿದರು. ಕಾರ್ಯಾಗಾರದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಡಾ.ಶಶಿಕಲಾ ರಾಠೋಡ, ರುಕ್ಷ್ಮಿಣಿ ಅಗಸರ ಮತ್ತು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುವ ೩೦ಕ್ಕೂ ಅಧಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

