ಆರ್ಭಟಿಸುತ್ತಿರುವ ಭೀಮೆ ಆತಂಕದಲ್ಲಿ ಜನ | ನದಿ ಪಾತ್ರದ ಗ್ರಾಮಗಳಲ್ಲಿ ಹೆಚ್ಚಿದ ಪ್ರವಾಹದ ಪರಿಸ್ಥಿತಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಆಲಮೇಲ ತಾಲೂಕಿನಲ್ಲಿ ಹಾಯ್ದು ಹೋಗಿರುವ ಭೀಮಾ ನದಿಯು ತನ್ನ ಆರ್ಭಟವನ್ನು ಮುಂದುವರಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಭೀಮಾ ನದಿಯ ಉಪನದಿ ಹಾಗೂ ಭೀಮಾನದಿಗೆ ಸೇರುವ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ಮತ್ತಷ್ಟು ಹೆಚ್ಚಿದೆ. ಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ನಲ್ಲಿ ಮಂಗಳವಾರ ೨ಲಕ್ಷ ೪೦ಸಾವಿರ ಕ್ಯೂಸೆಕ್ಸ್ ಇದ್ದ ನೀರಿನ ಹರಿವಿನ ಪ್ರಮಾಣ ಬುಧವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಏರು ಮಟ್ಟದಲ್ಲಿ ಸಾಗಿ ಸಾಯಂಕಾಲದ ವೇಳೆಗೆ ೨ಲಕ್ಷ ೯೦ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದು ಅಫ್ಜಲಪುರ ಕೆಎನ್‌ಎನ್‌ಎಲ್ ಎಇಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ.
ಹಳೆಯ ತಾರಾಪುರ ಗ್ರಾಮವನ್ನು ಸುತ್ತುವರೆದಿರುವ ಭೀಮಾನದಿಯ ನೀರು ಗ್ರಾಮವನ್ನು ಸಂಪೂರ್ಣ ನಡುಗಡ್ಡಿಯನ್ನಾಗಿಸಿದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಬಂದಿರುವ ಪರಿಣಾಮ ಗ್ರಾಮವು ಸಂಪೂರ್ಣ ನಡುಗಟ್ಟಾಗಿ ಪರಿವರ್ತನೆಯಾಗಿದೆ. ಹಳೆ ತಾವರಖೇಡ ಗ್ರಾಮದಲ್ಲಿ ಗ್ರಾಮದ ಅಂಚಿನಲ್ಲಿ ನೀರನ್ನು ಸುಳಿದಿದೆ. ಹಳೆ ಬ್ಯಾಡಗಿಹಾಳ ಗ್ರಾಮದಲ್ಲಿ ನೀರು ನುಗ್ಗಿದೆ. ದೇವಣಗಾಂವ ಗ್ರಾಮದ ಹನುಮಾನ್ ದೇವಸ್ಥಾನದ ಆವರಣವನ್ನು ನೀರು ಸುತ್ತುವರಿದಿದ್ದು ಜನವಸತಿ ಸಮೀಪ ನೀರು ಆವರಿಸುತ್ತಿದೆ. ಗ್ರಾಮದ ಪಕ್ಕದಲ್ಲಿದ್ದ ಖಬರಸ್ಥಾನದಲ್ಲಿ ನೀರು ತುಂಬಿರುವ ಪರಿಣಾಮ ಇಂದು ನಿಧನರಾಗಿದ್ದ ವೃದ್ಧರ ಅಂತ್ಯಕ್ರಿಯೆ ಮಾಡಲು ಬೇರೆ ಸ್ಥಳ ಹುಡುಕಬೇಕಾಯಿತು. ಶಂಬೇವಾಡ ಗ್ರಾಮದ ಜನ ಪ್ರದೇಶದ ಹತ್ತಿರ ನೀರು ನುಸುಳಿದ್ದು ಜನರನ್ನು ಎಚ್ಚರದಿಂದಿರಲು ತಿಳಿಸಲಾಗಿದೆ.
“ಕಡ್ಲೆವಾಡ, ಕುಮಸಗಿ, ಶಿರಸಗಿ, ಬಗಲೂರ ಗ್ರಾಮದ ಸಮೀಪ ನೀರು ನುಗ್ಗಿದೆ. ದೇವಣಗಾಂವ, ಬ್ಯಾಡಗಿಹಾಳ, ಶಂಬೆವಾಡ, ಕಡ್ಲೆವಾಡ ಗ್ರಾಮಗಳ ಜನರನ್ನು ಎಚ್ಚರದಲ್ಲಿರುವಂತೆ ಡಂಗೂರ ಸಾರಿ ತಿಳಿಸಲಾಗಿದೆ. ಹಾಗೂ ಇನ್ನೂ ಹೆಚ್ಚಿನ ನೀರು ಬಂದರೆ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯುವಂತಹ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸ್ಥಳದಲ್ಲಿ ಇದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ.”
– ಸಂಜೀವಕುಮಾರ ದೊಡ್ಡಮನಿ
ಪಂಚಾಯತ ಅಭಿವೃದ್ಧಿ ಅಧಿಕಾರಿ
“ಮೇಲಾಧಿಕಾರಿಗಳು ಭೀಮಾ ನದಿಯ ನೀರಿನ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಾವು ಸ್ಥಳೀಯವಾಗಿ ಗ್ರಾಮದಲ್ಲಿ ನದಿ ತೀರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಲ್ಲಿರಲು ಮಾಹಿತಿಯನ್ನು ನೀಡಲಾಗಿದೆ ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಹತೋಟಿಯಲ್ಲಿದೆ.”
– ಎಂ.ಕೆ.ಪೂಜಾರಿ
ಗ್ರಾಮ ಲೆಕ್ಕಾಧಿಕಾರಿ
