ಜಯ್ ನುಡಿ – ವ್ಯಕ್ತಿತ್ವ ವಿಕಸನ ಮಾಲಿಕೆ
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ
ಗರ್ಭವತಿ ಜಿಂಕೆಯೊಂದು ಕಾಡಿನಲ್ಲಿ ತನ್ನ ಮಗುವಿಗೆ ಜನ್ಮ ನೀಡಲು ಸುರಕ್ಷಿತವಾದ ಸ್ಥಳವೊಂದನ್ನು ಹುಡುಕಿ ಇಟ್ಟಿತ್ತು. ಅದು ನದಿ ತೀರವಾಗಿತ್ತು. ಮತ್ತು ಮೆತ್ತನೆಯ ಹುಲ್ಲಿರುವ ಸಮತಟ್ಟಾದ ಜಾಗವಾಗಿತ್ತು. ಪ್ರಸವ ವೇದನೆ ಶುರುವಾದಾಗ ಆ ಜಾಗಕ್ಕೆ ಹೋಗುವ ಯೋಜನೆ ಹಾಕಿತ್ತು. ಅಂದುಕೊಂಡ ಶುಭ ಘಳಿಗೆ ಸನ್ನಿಹಿತವಾದಾಗ ನಿಧಾನವಾಗಿ ಹುಡುಕಿದ್ದ ಸುರಕ್ಷಿತ ಸ್ಥಳದತ್ತ ಹೆಜ್ಜೆ ಹಾಕಿತು. ಆ ಸ್ಥಳಕ್ಕೆ ಮುಟ್ಟುವಷ್ಟರಲ್ಲಿ ಜಿಂಕೆಗೆ ಪ್ರಸವ ವೇದನೆ ತಾಳದಾಯಿತು. ಅದೇ ಕ್ಷಣಕ್ಕೆ ಆಗಸದಲ್ಲಿ ಕಾರ್ಮೋಡಗಳು ದಟ್ಟವಾದವು. ಮಳೆ ಬಂದರೆ ಎಂದು ಜಿಂಕೆ ಚಿಂತೆಯಲ್ಲಿರುವಾಗಲೇ ಮಿಂಚಿನಿಂದ ಕಾಡಿನಲ್ಲಿ ಬೆಂಕಿ ಹತ್ತಿತು. ಭಯಗೊಂಡ ಜಿಂಕೆ ಆ ಸ್ಥಳದಿಂದ ದೂರ ಹೋಗಬೇಕೆಂದು ನಿರ್ಧರಿಸಿ ಹಿಂದಕ್ಕೆ ತಿರುಗಿತು. ಜಿಂಕೆ ಕಂಡ ದೃಶ್ಯ ಇನ್ನೂ ಅಪಾಯಕ್ಕೆ ಒಡ್ಡುವಂತಿತ್ತು. ಎಡಕ್ಕೆ ಬೇಟೆಗಾರನೊಬ್ಬ ಜಿಂಕೆಗೆ ಗುರಿಯಿಟ್ಟು ಬಾಣ ಹೂಡಿದ್ದ. ಆಘಾತಕ್ಕೊಳಗಾದ ಜಿಂಕೆ ಬಲಕ್ಕೆ ತಿರುಗಿದಾಗ ಹಸಿದ ಸಿಂಹ ತನ್ನ ಕಡೆ ಬರುತ್ತಿರುವುದು ಕಂಡಿತು. ಎಡಕ್ಕೆ ಹೋದರೆ ಬೇಟೆಗಾರ, ಬಲಕ್ಕೆ ಹೋದರೆ ಹಸಿದ ಸಿಂಹ, ಮುಂದಕ್ಕೆ ಹೋಗೋಣವೆಂದರೆ ಕಾಡಿಗೆ ಬೆಂಕಿ ಬಿದ್ದಿದೆ. ಹಿಂದೆ ಸರಿಯೋಣವೆಂದರೆ ನದಿ ಇದೆ.
ಗರ್ಭವತಿ ಜಿಂಕೆಗೆ ಇದೊಂದು ದೊಡ್ಡ ಅಪಾಯದ ಕಾಲವೆನಿಸಿತು. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡುವುದು? ಎಂದು ಚಿಂತಿಸತೊಡಗಿತು. ಮರು ಕ್ಷಣವೇ ಜಿಂಕೆ, ಇದು ಚಿಂತೆ, ದುಗುಡ, ಆತಂಕ ಪಡುವ ಸಮಯವಲ್ಲ. ತಾಯಿ ಧರ್ಮವನ್ನು ಪಾಲಿಸುವ ಸಮಯವೆಂದು ನಿರ್ಧರಿಸಿತು. ಆ ಕ್ಷಣಕ್ಕೆ ತನ್ನ ಗಮನವನ್ನೆಲ್ಲ ಮಗುವಿಗೆ ಜನ್ಮ ನೀಡುವುದರಲ್ಲಿ ಕೇಂದ್ರೀಕರಿಸಿತು. ಅದೇ ಕ್ಷಣದಲ್ಲಿ ದಟ್ಟವಾದ ಕಾರ್ಮೋಡಗಳಿಂದ ಕಣ್ಣು ಕೋರೈಸುವ ಮಿಂಚು ಹೊಡೆಯಿತು. ಬೇಟೆಗಾರನ ಕಣ್ಣಿಗೆ ಕತ್ತಲು ಆವರಿಸಿ ಅವನು ಹೂಡಿದ ಬಾಣದ ಗುರಿ ತಪ್ಪಿ ಹಸಿದ ಸಿಂಹಕ್ಕೆ ತಗುಲಿತು. ದಟ್ಟ ಕಾರ್ಮೋಡಗಳು ಬಿರುಸಾಗಿ ಮಳೆ ಸುರಿಸತೊಡಗಿದವು. ಮಳೆಯ ರಭಸಕ್ಕೆ ಕಾಡಿನ ಬೆಂಕಿ ತಣ್ಣಗಾಯಿತು. ತಾಯಿ ಜಿಂಕೆ ಮುದ್ದು ಮರಿಗೆ ಜನ್ಮ ನೀಡಿತು. ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಶಕ್ತಿ ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ.’ ಅಪಾಯದ ಕ್ಷಣಗಳು, ಸಂಕಷ್ಟಗಳು ತಾತ್ಕಾಲಿಕ ಕ್ಷಣಗಳಾಗಿರುವವೇ ಹೊರತು ಶಾಶ್ವತವಲ್ಲ. ಪ್ರಬುದ್ಧರು ಪ್ರಜ್ಞಾವಂತರು ಅಪಾಯ ಕಾಲದಲ್ಲೂ ನೋವು ನೀಗಿಕೊಳ್ಳುವ ಸಹನ ಶಕ್ತಿಯಿಂದ ನಡೆದುಕೊಳ್ಳುವರು.
*ಆತಂಕ ಹಿಂದಕ್ಕೆ ತಳ್ಳಿ*
ಗರ್ಭಿಣಿ ಜಿಂಕೆಗೆ ಜೀವಂತವಾಗಿ ಉಳಿಯುವುದಕ್ಕೆ ಅಷ್ಟೆಲ್ಲಾ ಅಪಾಯಗಳಿದ್ದವು. ಹಾಗಿದ್ದಾಗ್ಯೂ ತಾನೂ ಬದುಕಿ ಉಳಿಯಿತು. ತನ್ನ ಕುಡಿಗೂ ಜನ್ಮ ನೀಡಿತು. ಪವಾಡವೆಂಬಂತೆ ಇದೆಲ್ಲ ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ! ತಾಯಿ ಧರ್ಮವನ್ನು ಪಾಲಿಸಲೇಬೇಕೆಂದು ಚಿಂತೆ, ಆತಂಕ, ದುಗುಡಗಳನ್ನೆಲ್ಲ ಹಿಂದಕ್ಕೆ ತಳ್ಳಿ ಜನನ ಕಾರ್ಯದಲ್ಲಿ ಮಗ್ನವಾಗಿದ್ದಕ್ಕೆ ಸಾಧ್ಯವಾಯಿತು ಎಂಬ ಉತ್ತರ ದೊರೆಯುತ್ತದೆ. ’ಮಾಡದಿರಬೇಕಾಗಿರುವುದನ್ನು ಗಮನಹರಿಸಿ ಮಾಡುವುದು ನಿಷ್ಪçಯೋಜಕವಾದುದು.’ ಎಂಬುದು ಮ್ಯಾನೆಜ್‌ಮೆಂಟ್ ಗುರು ಪೀಟರ್ ಡ್ರೆಕರ್ ಮಾತು. ಸಂದಿಗ್ಧ ಪರಿಸ್ಥಿತಿಯಲ್ಲಿ ಮುಂದಿರುವ ಅಪಾಯಗಳಿಗೆ, ಮನಸ್ಸಿನ ತಾಕಲಾಟಗಳಿಗೆ ಒತ್ತು ನೀಡಲೇಬಾರದು. ಆ ಕ್ಷಣದಲ್ಲಿ ಮಾಡಲೇಬೇಕಾಗಿರುವುದರ ಬಗ್ಗೆ ಉಪಾಯದಿಂದ ನಡೆದುಕೊಳ್ಳಬೇಕು. ಹಾಗಾದಾಗ ಮಾತ್ರ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ. ಎದುರಿಸಿ ಗೆಲ್ಲಲೂ ಸಾಧ್ಯ. ನಿತ್ಯದ ಜೀವನದಲ್ಲಿಯ ಏರು ಪೇರುಗಳಿಂದ ಕಂಗಾಲಾದ ನಮಗೆ ಅಪಾಯಗಳಿಂದ ಬಚಾವಾಗುವುದು ಕಷ್ಟಕರವೆನಿಸುತ್ತದೆ.
*ಎದೆಯೊಡ್ಡಿ ನಿಲ್ಲಿ*
ಅಪಾಯಗಳು ನಮ್ಮ ಶಕ್ತಿಯನ್ನು ಬಸಿದುಬಿಡುತ್ತವೆ ಎಂದು ತಪ್ಪಾಗಿ ತಿಳಿದಿದ್ದೇವೆ. ದೋಣಿ ನೀರಿನಲ್ಲಿ ಪಯಣಿಸಲೆಂದೇ ನಿರ್ಮಾಣಗೊಂಡಿದ್ದು. ಅದು ಸಿಹಿ ನೀರೋ ಉಪ್ಪು ನೀರೋ ಅನಗತ್ಯ. ಆದರೆ ಆ ನೀರು ದೋಣಿಯಲ್ಲಿ ಬಂದು ಸೇರದಂತೆ ಎಚ್ಚರಿಕೆ ವಹಿಸಬೇಕು. ಅಂತೆಯೇ ಬದುಕಿನಲ್ಲಿ ಅಪಾಯದ ತಿರುವುಗಳು ಸಾಮಾನ್ಯ. ಆದರೆ ಅವು ನಮ್ಮ ಬದುಕನ್ನು ಹಾಳುಗೆಡುವುದ ಹಾಗೆ ನೋಡಿಕೊಳ್ಳಬೇಕು. ವಾಸ್ತವದಲ್ಲಿ ಅಪಾಯಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶಗಳು. ಇನ್ನಷ್ಟು ಕ್ರಿಯಾಶೀಲವಾಗಿಸುತ್ತವೆ. ಸವಾಲುಗಳನ್ನು ಎಸೆದು ಸಶಕ್ತರನ್ನಾಗಿಸುತ್ತದೆ. ಎಂದು ಚೆನ್ನಾಗಿ ಅರ್ಥೈಸಿಕೊಂಡಾಗ ಮಾತ್ರ ಲೆಕ್ಕವಿಲ್ಲದಷ್ಟು ಉಪಾಯಗಳು ಸಾಲಾಗಿ ನಿಲ್ಲುತ್ತವೆ. ಅಪಾಯಗಳಿಗೆ ಎದೆಯೊಡ್ಡಿ ನಿಲ್ಲುವ ಛಾತಿ ನಮ್ಮದಾಗಬೇಕು. ಅಂಥ ಧಾಡಸೀತನ ನಾವು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಅಪಾಯಗಳು ಹೇಳಹೆಸರಿಲ್ಲದಂತೆ ಮಾಯವಾಗುತ್ತವೆ. ಬಾಲ ಮುದುರಿಕೊಂಡು ತಮಗಿಲ್ಲಿ ಅವಕಾಶವಿಲ್ಲವೆಂದು ಜಾಗ ಖಾಲಿ ಮಾಡುತ್ತವೆ. ವಾಸ್ತವದಲ್ಲಿ ಅಪಾಯಗಳು ಬದುಕಿನ ರೋಚಕತೆಯನ್ನು ಹೆಚ್ಚಿಸುತ್ತವೆ.
ಕೇಂದ್ರೀಕರಿಸಿ
‘ನಿಜವಾದ ವಿದ್ಯೆ ಮನುಷ್ಯನಿಗೆ ಯೋಚಿಸುವುದನ್ನು ಕಲಿಸುತ್ತದೆ.’ ಎಂದಿದ್ದಾರೆ ಕನ್ನಡದ ಖ್ಯಾತ ಅಂಕಣಕಾರರಾದ ಹಾ ಮಾ ನಾಯಕ. ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣ ಪಡೆದವರೂ ಅಪಾಯಗಳಿಗೆ ಸಿಲುಕಿದಾಗ ಯೋಚಿಸಲು ಬಾರದೇ, ಒತ್ತಡಕ್ಕೆ ಸಿಲುಕಿ ವಿಲ ವಿಲ ಒದ್ದಾಡುತ್ತಾರೆ. ಕೆಲವೊಬ್ಬರಂತೂ ಇನ್ನಷ್ಟು ಮುಂದಕ್ಕೆ ಹೋಗಿ ಜೀವವನ್ನೇ ಕಳೆದುಕೊಳ್ಳುತ್ತಾರೆ. ತಪ್ಪು ಮಾಡುವುದಕ್ಕಿಂತ ನಿಧಾನಿಸುವುದು ಒಳ್ಳೆಯದು. ಅಪಾಯಗಳು ನಮ್ಮ ಭುಜ ಹಿಡಿದು ಅಲುಗಾಡಿಸುತ್ತವೆ. ಉಸಿರಾಡಲು ಶ್ರಮ ಪಡುವಂತೆ ಮಾಡುತ್ತವೆ. ಕುಳಿತಲ್ಲೇ ನಿದ್ರಿಸುತ್ತಿದ್ದ ನಮ್ಮನ್ನು ಕಾಡಿಸಿ ನಿದ್ರೆಗೆ ಜಾರದಂತೆ ಮಾಡುತ್ತವೆ. ‘ಚೆನ್ನಾಗಿ ಯೋಚಿಸುವುದು ಬುದ್ಧಿವಂತಿಕೆ; ಚೆನ್ನಾಗಿ ಯೋಜಿಸುವುದು ಹೆಚ್ಚು ಬುದ್ಧಿವಂತಿಕೆ, ಚೆನ್ನಾಗಿ ಮಾಡುವುದು ಅತಿ ಬುದ್ಧಿವಂತಿಕೆ ಮತ್ತು ಎಲ್ಲದಕ್ಕಿಂತ ಅತ್ಯುತ್ತಮ.’ ನಮ್ಮ ಅಲ್ಪ ನಿರ್ವಹಣೆಯಿಂದ ಅಪಾಯಗಳು ಗೆಲ್ಲುತ್ತವೆ ಎಂಬುದನ್ನು ನೆನಪಿಡಬೇಕು. ಅಪಾಯಗಳ ವಿರುದ್ಧ ಹೋರಾಡಲು ಮನಸ್ಸನ್ನು ಕೇಂದ್ರೀಕರಿಸಬೇಕು. ಕಾರ್ಯೋನ್ಮುಖರಾಗಬೇಕು.
*ಸ್ಥಿತಪ್ರಜ್ಞೆ ಇರಲಿ*
ಕುರುಡನು ಕುಂಟನನ್ನು ಹೊತ್ತು ನಡೆದಾಗ ಇಬ್ಬರೂ ಮುಂದಕ್ಕೆ ನಡೆಯುತ್ತಾರೆ. ಹಾಗೆಯೇ ಅಪಾಯಗಳು ಎದುರಾದಾಗ ವಿವೇಕವನ್ನು ಕಳೆದುಕೊಳ್ಳದೇ ವಿವೇಚನೆಯಿಂದ ನಡೆದುಕೊಳ್ಳುವುದು ಒಳಿತು. ಪ್ರತಿಯೊಂದು ಅವಘಡದಲ್ಲೂ ಜೀವನಕ್ಕೊಂದು ದೊಡ್ಡ ಪಾಠ ಅವಿತು ಕುಳಿತಿರುತ್ತದೆ. ಅದನ್ನು ಹುಡುಕುವ ಮನಸ್ಥಿತಿ ನಮ್ಮದಾಗಬೇಕು. ‘ಅಪಾಯಗಳಿಗೆ ಉಪಾಯಗಳೇ ರಾಮಬಾಣ. ಉಪಾಯಗಳಿಗೆ ವಿವೇಕಯುತ ಸ್ಥಿತಪ್ರಜ್ಞೆಯೇ ತಾಯಿಬೇರು.’ ಅಪಾಯದ ಬಾಹ್ಯ ರೂಪದಿಂದ ಯಾವುದನ್ನೂ ಅಳೆಯಬಾರದು. ಹೊರಗೆ ಒಂದು ಬಗೆಯಾಗಿ ಕಾಣಿಸಿ, ಜೀವ ಝಲ್ಲೆನಿಸುವ ಅಪಾಯಗಳು ಒಳಗೆ ಒಳಿತನ್ನು ಅಡಗಿಸಿಟ್ಟುಕೊಂಡಿರುತ್ತವೆ. ಅಪಾಯಗಳು ನಮ್ಮಲ್ಲಿ ಸೂಪ್ತವಾಗಿರುವ ಶಕ್ತಿಯನ್ನು ಹೊರಗೆಳೆಯುತ್ತವೆ. ಅಪಾಯದ ಸಂದರ್ಭದಲ್ಲಿ ನಮ್ಮ ಹಿಂದೆ ನೆರಳು ಬಂದಂತೆ ಉಪಾಯಗಳು ತನ್ನಿಂದ ತಾನೇ ಬರುತ್ತವೆ. ಅಪಾಯದಲ್ಲಿಯ ನಿರ್ಧಾರಗಳು ನಮ್ಮ ಬದುಕಿನ ಸಂಪೂರ್ಣ ಚಿತ್ರಣವನ್ನೇ ಬದಲಿಸುತ್ತವೆ. ಅಪಾಯದಿಂದ ಪಾರಾಗಿದ್ದಕ್ಕೆ ಸಂಭ್ರಮಿಸುವಂತೆಯೂ ಮಾಡುತ್ತವೆ. ಎಷ್ಟೊಂದು ಸಾಹಸಮಯ ಈ ಬದುಕು ಎಂದೆನಿಸುತ್ತವೆ. ಕಾರ್ಮೋಡಗಳು ಕರಗಿ ಆಗಸ ತಿಳಿಯಾದಂತೆ ಅಪಾಯಗಳು ಕರಗಿ ಆಹಾ! ಎಷ್ಟು ಸೊಗಸು ಈ ಬದುಕು ಎಂಬ ಉಲ್ಲಸಿತ ಭಾವ ಮೂಡಿಸುತ್ತದೆ. ಮನಸ್ಸು ಗರಿಗೆದರಿದ ನವಿಲಿನಂತೆ ನರ್ತಿಸುತ್ತದೆ. ಜೀವನದ ಹಾದಿಯಲ್ಲಿ ಅಪಾಯದ ಹೆಜ್ಜೆ ಗುರುತುಗಳೂ ಸಿಹಿ ಪಾಲನ್ನು ತರುವಂತಾಗಲಿ.