ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದ್ದು ರೈತರು ತಮ್ಮ ಮನೆ, ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ, ಈ ಸಂದರ್ಭದಲ್ಲಿ ತಾವು ರೈತರ ಜೊತೆಗಿದ್ದು, ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಬುಧವಾರ ಚಡಚಣ ತಾಲೂಕಿನ ನದಿ ಪಾತ್ರದ ಉಮರಜ, ರೇವತಗಾಂವ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಉಪರಜ ಗ್ರಾಮದಲ್ಲಿ ಅನೇಕ ಮನೆಗಳು ಮಳೆಯಿಂದ ನೆಲಸಮಗೊಂಡಿವೆ. ರೈತರ ಮತ್ತು ಬಡ ಕೂಲಿ ಕಾರ್ಮಿಕರ ಕಷ್ಟ ನೋಡಿ ಕಷ್ಟವಾಗುತ್ತಿದೆ. ರೈತರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸುವ ದಿಶೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವದಾಗಿ ಅವರು ಹೇಳಿದರು.
ಉಮರಜ ಗ್ರಾಮದಲ್ಲಿ ಮಳೆಯಿಂದಾಗಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ತಕ್ಷಣ ನಾಲ್ಕು ಹೊಸ ಕೊಣೆಗಳನ್ನು ನಿರ್ಮಿಸಿಕೊಡುವದಾಗಿ ಅವರು ಹೇಳಿದರು. ರಸ್ತೆಗಳ ಹಾಳಾಗಿರುವ ಕುರಿತು ರೈತರು ಶಾಸಕರಿಗೆ ಮನವಿಯನ್ನು ಮಾಡಿದರು. ಚಡಚಣ ಭಾಗದ ರಸ್ತೆಗಳ ನಿರ್ಮಾಣಕ್ಕಾಗಿ ಸಾಕಷ್ಟು ಅನುದಾನವನ್ನು ವಿನಿಯೋಗಿಸಿದ್ದು ಸ್ವಲ್ಪ ಮಳೆ ಕಡಿಮೆಯಾದ ಮೇಲೆ ಕೆಲವು ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಹೇಳಿದರು.
ಚಡಚಣ ತಹಶೀಲದಾರ ಸಂಜಯ ಇಂಗಳೆ ಮಾತನಾಡಿ ಭೀಮಾ ನದಿಯಿಂದ ೨.೨ ಲಕ್ಷ ಕ್ಯೂಸೆಕ್ಸ ನೀರನ್ನು ಭೀಮಾ ನದಿಗೆ ಬಿಡಲಾಗಿದೆ. ಆದರೆ ಮಹಾರಾಷ್ಟ ಸರಕಾರ ಈ ನೀರನ್ನು ಸೀನಾ ನದಿಯ ಮುಖಾಂತರ ಬಿಟ್ಟಿರುವದರಿಂದ ಚಡಚಣ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಯಾವುದೆ ರೀತಿಯ ಪ್ರವಾಹ ಉಂಟಾಗಿಲ್ಲ. ಸದ್ಯ ನಮ್ಮ ಭಾಗದಲ್ಲಿ ೪೦ ಸಾವಿರ ಕ್ಯೂಸೆಕ್ಸ ನೀರು ಹರಿಯುತ್ತಿರುವದರಿಂದ ನದಿ ಪಾತ್ರದ ರೈತರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೇಸ ಪಕ್ಷದ ಚಡಚಣ ಮಂಡಲ ಅಧ್ಯಕ್ಷ ಆರ್.ಡಿ ಹಕ್ಕೆ, ಅಮಶಿದ್ದ ಬಿಜ್ಜರಗಿ ಸೇರಿದಂತೆ ನೂರಾರು ರೈತರು ಹಾಜರಿದ್ದರು.

