ಕನಾ೯ಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರೊಂದಿಗೆ ಶಿಕ್ಷಕರ ಸಂಘ ಚಚೆ೯- ಮನವಿ ಸಲ್ಲಿಕೆ
ಆಲಮಟ್ಟಿ: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ ೨೨ ರಿಂದ ಪ್ರಾರಂಭಗೊಂಡಿರುವ ಶೈಕ್ಷಣಿಕ ಸಾಮಾಜಿಕ ಗಣತಿ ಕಾರ್ಯದಲ್ಲಿ ಶಿಕ್ಷಕರು ಹಲಬಗೆಯ ತೀವ್ರತರವಾದ ತೊಂದರೆಗಳನ್ನು ಎದುರಿಸುತ್ತಿದ್ದು ಕೂಡಲೇ ಆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್ ಬುಧವಾರ ಕನಾ೯ಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್.ನಾಯಕ ಹಾಗೂ ಕಾರ್ಯದರ್ಶಿ ದಯಾನಂದ ಅವರನ್ನು ಭೇಟಿಯಾಗಿ ಗಣತಿ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಮನವರಿಕೆ ಮಾಡಿದರಲ್ಲದೇ ತಕ್ಷಣವೇ ತೊಂದರೆ ನೀಗಿಸಲು ಮನವಿ ಪತ್ರ ಸಲ್ಲಿಸಿದರು.
ಈ ಸಮೀಕ್ಷೆಯಲ್ಲಿ ನಿಯೋಜನೆಗೊಂಡಿರುವ ರಾಜ್ಯದ ಗಣತಿದಾರ ಶಿಕ್ಷಕರು ಪಡುತ್ತಿರುವ ಪಟಿಪಾಟಲು ಸಮಗ್ರವಾಗಿ ಆಯೋಗದ ಮುಖ್ಯಸ್ಥರ ಗಮನಕ್ಕೆ ತಂದು ತೊಂದರೆ ಸರಿದೂಗಿಸುವಂತೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಮಧುಸೂದನ್ ನಾಯಕ ಹಾಗೂ ದಯಾನಂದ ಅವರಿಂದ ವ್ಯಕ್ತವಾಯಿತು. ಸಚಿವರೊಂದಿಗೆ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಈ ವೇಳೆ ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿಯುವ ಆಶಾಭಾವದ ಭರವಸೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಚಂದ್ರಶೇಖರ ನುಗ್ಗಲಿ , ಕಾರ್ಯದರ್ಶಿ ಚೇತನ್ ಹೆಚ್.ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

