ಕ್ಲಿನಿಕಲ್ ಸೈಕಾಲಾಜಿಸ್ಟ್ ಮತ್ತು ಮನಃಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚಂದ್ರಕಾಂತ.ಬಿ. ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಖಿನ್ನತೆ, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ, ಜೀವನದಲ್ಲಿ ಹತಾಶೆ, ಅತಿಯಾದ ಚಿಂತೆ, ಭಯ ಮತ್ತು ಭಾವನಾತ್ಮಕ ಅಸ್ಥಿರತೆಗಳಿಂದ ಮಾನಸಿಕ ಆರೋಗ್ಯದಲ್ಲಿ ಬದಲಾವಣೆಗಳಾಗುತ್ತಿವೆ. ಇದರಿಂದ ತೀವ್ರ ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕ್ಲಿನಿಕಲ್ ಸೈಕಾಲಾಜಿಸ್ಟ್ ಮತ್ತು ಮನಃಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚಂದ್ರಕಾಂತ.ಬಿ. ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲಭಾಷಾ ವಿಭಾಗದಡಿಯಲ್ಲಿ ಆಯೋಜಿಸಿದ “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಆಪ್ತ ಸಮಾಲೋಚನೆ” ವಿಷಯ ಕುರಿತಾದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
ಪೋಷಕರ ಶೈಕ್ಷಣಿಕ ಸಾಧನೆಗಾಗಿ ಅತಿಯಾದ ನಿರೀಕ್ಷೆಯೇ ಮಕ್ಕಳ ಮೇಲೆ ಅತಿ ಹೆಚ್ಚಿನ ಮಾನಸಿಕ ಒತ್ತಡವೇ ಇದಕ್ಕೆಲ್ಲ ಪ್ರಮುಖ ಕಾರಣವೆಂದು ಹೇಳಬಹುದು. ಮಕ್ಕಳಲ್ಲಿನ ಆತ್ಮಸ್ಥೈರ್ಯದ ಕೊರತೆಯಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿ, ಜೀವನ-ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಮತ್ತು ಪರಿಹರಿಸುವಂತಹ ಭರವಶೆಯನ್ನು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರಲ್ಲದೆ, ಅದಕ್ಕಾಗಿ ನಮ್ಮ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದಡಿಯಲ್ಲಿ ವಿಶೇಷವಾಗಿ ಮಾನಸಿಕ ಅನಾರೋಗ್ಯ ಹೊಂದಿದ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಮತ್ತು ಆಪ್ತ ಸಮಾಲೋಚನೆಯನ್ನು ಕೈಗೊಂಡು ಮಾನಸಿಕ ಸದೃಢರನ್ನಾಗಿಸುವ ಕಾರ್ಯ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಯಾಗಿದ್ದ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ಅತಿಯಾದ ಮೋಬೈಲ್ ವ್ಯಾಮೋಹ, ಮಾನಸಿಕ ಹಿಂಸೆ, ವೈಫಲ್ಯ, ಮತ್ತು ಯಾವುದೇ ಸಮಸ್ಯೆಯಿಂದ ಬಳಲುತ್ತಿರುವ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯಾ ಮನೋಭಾವ ಹೆಚ್ಚಾಗುತ್ತಿರುವುದು ತೀರ ಕಳವಳಕಾರಿ ಸಂಗತಿಯಾಗಿದೆ. ಅದಕ್ಕಾಗಿ ಇಂತಹ ಮಾನಸಿಕ ಆರೋಗ್ಯ ಮತ್ತು ತಿಳುವಳಿಕೆ ಮತ್ತು ಆಪ್ತ ಸಮಾಲೋಚನೆ ಉಪನ್ಯಾಸಗಳ ಮೂಲಕ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಎಲ್ಲ ಸಮಸ್ಯೆಗಳಿಗೊಂದು ಪರಿಹಾರ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸ ಮತ್ತು ಅರಿವಿನ ಬೆಳಕನ್ನು ಮಕ್ಕಳಲ್ಲಿ ಮೂಡಿಸುವ ಇಂದಿನ ಅಗತ್ಯತೆಯಾಗಿದೆ ಎಂದು ಹೇಳಿದರು.
ಡಾ. ಚಂದ್ರಕಾಂತ ಅವರು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿಯಲು ೧೦ ಅಂಶಗಳ ಪ್ರಶ್ನಾವಳಿಯನ್ನು ನೀಡುವದರ ಮೂಲಕ ಆಪ್ತ ಸಮಾಲೋಚನೆ ಕೈಗೊಂಡರು. ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಕಂಡುಕೊಂಡರು.
ಸಮಾರಂಭದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಡಾ. ಬಿ.ಎನ್.ಶಾಡದಳ್ಳಿ, ರಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ವಿನೋದ ಹುಲ್ಲೂರ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.
ಈ ವಿಶೇಷ ಉಪನ್ಯಾಸದಲ್ಲಿ ಬಿ.ಎಸ್ಸಿ ವಿಭಾಗದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.

