ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮ,ಪಟ್ಟಣ ಹಾಗೂ ನಗರವನ್ನು ಸ್ವಚ್ಛವಾಗಿರಿಸಿ ಸುಂದರವಾಗಿಸುವಲ್ಲಿ ಪೌರಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮಡಿವಾಳಪ್ಪ ಕರಡಿ ಹೇಳಿದರು.
ಅವರು ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ನಗರದ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಹೇಳಿದ ಅವರು ಸರ್ಕಾರ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಸುಂದರ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು.
ಉಪಮಹಾಪೌರರಾದ ಸುಮಿತ್ರಾ ಜಾಧವ ಅವರು ಮಾತನಾಡಿ,ಪೌರಕಾರ್ಮಿಕರು ತಮ್ಮ ಕಾರ್ಯದೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಸದಸ್ಯರಾದ ಆರತಿ ಶಹಾಪುರ ಮಾತನಾಡಿ, ನಗರ ಸ್ವಚ್ಛ ಹಾಗೂ ಶುಭ್ರವಾಗಿ ಕಾಣಲು ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವವಾಗಿದೆ. ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ರಾಜುಮಗಿ ಮಠ, ಶಿವರುದ್ರಪ್ಪ ಬಾಗಲಕೋಟ ಮಾತನಾಡಿದರು.
ಪೌರಕಾರ್ಮಿಕರಿಗಾಗಿ ಆಯೋಜಿಸಲಾದ ವಿವಿಧ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಸಾಧನೆ ಮಾಡಿದ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿಗಳಾದ ಸಂಗಣ್ಣ ಲಕ್ಕಣ್ಣವರ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಹಾಗೂ ನಾರಾಯಣಕರ ಸೇರಿದಂತೆ ಮಹಾನಗರಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
“ಸರ್ಕಾರದ ವತಿಯಿಂದ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ನೀಡಿದ್ದು, ತಮ್ಮ ದೈನಂದಿನ ಕಾರ್ಯಗಳಲ್ಲಿ ಸುರಕ್ಷಾ ಪರಿಕರಗಳನ್ನು ಉಪಯೋಗಿಸಿ ಮುಂಜಾಗ್ರತೆಯಿದ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು .”
– ವಿಜಯಕುಮಾರ ಮೆಕ್ಕಳಕಿ
ಮಹಾನಗರ ಪಾಲಿಕೆ ಆಯುಕ್ತರು

