ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಾಸಕರ ಅಭಿವೃದ್ಧಿಪರ ಕಾರ್ಯಗಳು ವಿರೋಧ ಪಕ್ಷದವರಿಗೆ ತಮ್ಮ ಮುಂದಿನ ಭವಿಷ್ಯದ ಆಸ್ತಿತ್ವ ಬಗ್ಗೆ ಭಯ ಮೂಡಿಸುತ್ತಿವೆ. ಅದೇ ಕಾರಣಕ್ಕಾಗಿ ತಾವು ಅಭಿವೃದ್ಧಿಯನ್ನು ಸಹಿಸದೇ ಕೊಂಕು ಮಾತುಗಳನ್ನಾಡುತ್ತಿದ್ದೀರಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಗುಡುಗಿದರು.
ಸಿಂದಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ವೇ ನಂ.೮೪೨ರ ಪಲಾನುಭವಿಗಳಿಗೆ ಶಾಸಕರು ಮನಗೂಳಿ ಪ್ರತಿಷ್ಠಾನದ ವತಿಯಿಂದ ೩೦ಲಕ್ಷ ರೂ.ಗಳನ್ನು ನೀಡಿದ್ದಾರೆ. ಆ ಪಲಾನುಭವಿಗಳಿಗೆ ನಿಮ್ಮಿಂದಾದ ಕೊಡುಗೆ ಏನು ಎಂದು ವಿರೋಧ ಪಕ್ಷದ ನಾಯಕರಿಗೆ ಪ್ರಶ್ನಿಸಿದರು. ಸದ್ಯ ಸಿಂದಗಿ ಕೊಡಂಗಲ್ ರಸ್ತೆ ಹಲವು ತಿಂಗಳುಗಳಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಇದಕ್ಕಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಯೋಜನಾಧಿಕಾರಿ ಇವರಿಗೆ ಸೆ.೦೯.೨೦೨೫ರಂದು ೫ನೆಯ ಹಂತದ ಘಟ್ಟ-೨ರಲ್ಲಿ ಅನುದಾನ ಬಿಡುಗಡೆ ಮಾಡವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಸಚಿವರು ಸ್ಪಂದಿಸಿದ್ದಾರೆ. ೨೪.೮.೨೦೨೫ರಂದು ಲೋಕೋಪಯೋಗಿ ಸಚಿವರು ಕಲಬುರಗಿಯಿಂದ ಸಿಂದಗಿಗೆ ಬರಬೇಕಾದರೆ ಶಾಸಕರು ಸಚಿವರನ್ನು ಗೋಲಗೇರಿ ರಸ್ತೆಯ ಮುಖಾಂತರವೇ ಕಾರಿನಲ್ಲಿ ಕರೆ ತಂದರು. ಅವರ ಉದ್ದೇಶ ಸಚಿವರಿಗೂ ರಸ್ತೆಯ ವಸ್ತುಸ್ಥಿತಿಯ ಮನವರಿಕೆಯಾಗಲಿ ಎಂಬುದಾಗಿತ್ತು. ಸಚಿವರು ಸಿಂದಗಿಗೆ ಬಂದ ನಂತರ ಶೀಘ್ರವೇ ಕಾಮಗಾರಿ ಪ್ರಾರಂಭಿಸುವ ಭರವಸೆಯನ್ನು ಶಾಸಕರಿಗೆ ನೀಡಿದರು.
ಆದರೆ ಈಗ ಇದೆಲ್ಲವನ್ನು ಅರಿತ ವಿರೋಧ ಪಕ್ಷದವರು ಸೆ.೨೪ರಂದು ಗೋಲಗೇರಿಯ ಡಂಬಳ ಕ್ರಾಸ್ ಬಳಿ ಇದೇ ವಿಷಯದ ಕುರಿತು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇವರ ಉದ್ದೇಶವಿಷ್ಟೆ ಅದೇನೆಂದರೆ ನಾವು ಪ್ರತಿಭಟನೆ ಮಾಡಿದ ನಂತರವೇ ಕಾಮಗಾರಿಗೆ ಚಾಲನೆ ದೊರೆಯಿತು ಎಂದು ಬಿಂಬಿಸುವುದಾಗಿದೆ. ಆದರೆ ಜನ ಹುಚ್ಚರಲ್ಲ. ವಸ್ತುಸ್ಥಿತಿ ಏನು ಎಂಬುದು ಜನ ಸಾಮಾನ್ಯರಿಗೂ ಗೊತ್ತು. ಬರೀ ಗಿಮಿಕ್ಸ್ ಮಾಡುವುದನ್ನು ಬಿಟ್ಟು ಜನಪರ ಕೆಲಸಗಳನ್ನು ಪ್ರಸಂಶಿಸುವ ಗುಣ ಬೆಳೆಸಿಕೊಳ್ಳಿ ಆಗ ಜನ ಸಾಮಾನ್ಯರು ನಿಮ್ಮ ಮೇಲೆ ಭರವಸೆ ಇಡುತ್ತಾರೆ. ನಮ್ಮ ಹೋರಾಟದಿಂದಲೆ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎಂದು ಮಾಜಿ ಶಾಸಕರು ಹೇಳುತ್ತಿದ್ದಾರೆ. ನೀವು ಹೀಗೆಯೇ ಖಾಯಂ ಆಗಿ ವಿರೋಧ ಪಕ್ಷದಲ್ಲಿದ್ದು ಹೋರಾಟ ಮಾಡುತ್ತಾ ಇದ್ದು ಸಿಂದಗಿಯ ಅಭಿವೃದ್ಧಿಗೆ ಸಹಕರಿಸಿರಿ ಎಂದರು. ಈ ವೇಳೆ ಪ್ರವೀಣ ಕಂಠಿಗೊಂಡ, ಕಲ್ಲಪ್ಪ, ಸಾಯಬಣ್ಣ ಪುರದಾಳ ಇದ್ದರು.

