ದೇವರಹಿಪ್ಪರಗಿ: ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಿ ರೈತ ಸಮುದಾಯದ ನೆರವಿಗೆ ಧಾವಿಸುವಂತೆ ರೈತರು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.
ಮತಕ್ಷೇತ್ರದ ಇಂಗಳಗಿ, ನಿವಾಳಖೇಡ, ಮುಳಸಾವಳಗಿ ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಗಂಗನಳ್ಳಿ ಗ್ರಾಮಗಳು ಸೇರಿದಂತೆ ಮತಕ್ಷೇತ್ರದ ರೈತರು ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್‌ಅಹ್ಮದ್ ಬೇಪಾರಿ ನೇತೃತ್ವದಲ್ಲಿ ವಿಜಯಪುರದ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಪ್ರಭುಗೌಡ, ಬಶೀರ್ ಅಹ್ಮದ್ ಬೇಪಾರಿ ಹಾಗೂ ತಾಲ್ಲೂಕು ರೈತಸಂಘದ ಅಧ್ಯಕ್ಷ ಅಜೀಜ್ ಯಲಗಾರ ಮಾತನಾಡಿ, ಮತಕ್ಷೇತ್ರದ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆಯಲ್ಲಿ ನೀರು ಹರಿಯದೇ ಇದ್ದು, ಈ ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಯಲ್ಲಿ ಸುಮಾರು ೧೪೬ ಕಿ.ಮೀ ನೀರು ಹರಿಯಬೇಕು. ಅದಕ್ಕಾಗಿ ತಕ್ಷಣವೇ ನೀರು ಹರಿಸಲು ಕ್ರಮಕೈಗೊಳ್ಳಲು ವಿನಂತಿಸಿದರು.
ರೈತರ ಸಮಸ್ಯೆಯನ್ನು ಆಲಿಸಿದ ಸುನೀಲಗೌಡ ಪಾಟೀಲ ತಕ್ಷಣವೇ ಕೆಬಿಜೆಎನ್‌ಎಲ್ ಆಲಮಟ್ಟಿ ಹಾಗೂ ರಾಮಪೂರ ಕಚೇರಿಯ ಎಸ್‌ಇ ಬಸವರಾಜ ಎಇಇ ಶಿವನಾಳ ಅವರೊಂದಿಗೆ ಮಾತನಾಡಿ, ಎರಡು ದಿನದಲ್ಲಿ ಇನ್ನೆರಡು ಮೋಟರ್‌ಗಳು ಸಹಿತ ಒಟ್ಟು ನಾಲ್ಕು ಮೋಟರ್‌ಗಳ ಸಹಾಯದಿಂದ ನೀರು ಪೂರೈಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತರಾದ ಶಂಕರಗೌಡ ಕೋಟಿಖಾನಿ, ರೇವಣಯ್ಯ ಮಠ, ಶಾಂತಗೌಡ ಕೊಣ್ಣೂರ, ಸಾಹೇಬಗೌಡ ರೆಡ್ಡಿ(ಕಡ್ಲೇವಾಡ ಪಿಸಿಎಚ್), ಶ್ರೀಮಂತ ತಳವಾರ (ನಿವಾಳಖೇಡ), ಶಿವಶಂಕರ ರೂಗಿ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ತಳವಾರ, ಮಾದೇವಪ್ಪ ನಾಟೀಕಾರ, ಶ್ರೀಪತಿ ದಳವಾಯಿ, ಶಿವಪ್ಪ ಕಾರಜೋಳ, ಎ.ಎಮ್.ಬಾಗವಾನ, ನಿಂಗಣ್ಣ ಬಿರಾದಾರ, ಇಸ್ಮಾಯಿಲ್ ಜುಮನಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.
Related Posts
Add A Comment