ಬಸವನಬಾಗೇವಾಡಿ: ನಾಡಿನ ಎಲ್ಲ ಗುರು-ವಿರಕ್ತರು ಒಂದಾಗಿ ಸುಂದರ ಸಮಾಜ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಹಾನಗಲ್ಲ ಕುಮಾರ ಸ್ವಾಮೀಜಿಯವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಶ್ರೀಶೈಲಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮೀಜಿಯವರ ೧೫೬ ನೇ ಜಯಂತಿ ಮಹೋತ್ಸವದಂಗವಾಗಿ ೧೧ ದಿನ ಹಮ್ಮಿಕೊಂಡಿದ್ದ ಕುಮಾರಸ್ವಾಮೀಜಿಯವರ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಗುರು ಪರಂಪರೆ ಶ್ರೇಷ್ಠ, ವಿರಕ್ತ ಪರಂಪರೆ ಶ್ರೇಷ್ಠ, ಬೇರೆ ಪರಂಪರೆ ಶ್ರೇಷ್ಠ ಎಂಬ ಬೇಧ-ಭಾವ ಹೋಗಬೇಕು. ಲಿಂಗಾಯತ-ವೀರಶೈವ ಬೇರೆ ಎಂದು ಕೆಲ ದಿನಗಳ ಹಿಂದೆ ಸಮಾಜದಲ್ಲಿ ಗಾಳಿ ಬೀಸಿತು. ಸಮಾಜದಲ್ಲಿರುವ ಎಲ್ಲ ಬಾಂಧವರು ಒಂದಾಗಿ ಇರಬೇಕೆಂದು ಹಾನಗಲ್ಲ ಕುಮಾರಸ್ವಾಮೀಜಿಯವರು ಕನಸು ಕಂಡಿದ್ದರು. ಇದಕ್ಕಾಗಿ ಅವರು ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ ಸ್ಥಾಪನೆ ಮಾಡಿದ್ದರು. ಅವರು ಸಂಘಟಿತ, ಸದೃಢ ಸಮಾಜ ಇರಬೇಕೆಂಬ ಸದಾಶಯ ಹೊಂದಿದ್ದರು. ನಾವು ಸೈದ್ದಾಂತಿಕವಾಗಿ ಅವಲೋಕಿಸಿದಾಗ ಯಾವದರಲ್ಲೂ ತಾರತಮ್ಯ ಕಾಣುವುದಿಲ್ಲ. ಇದನ್ನು ನಾವೆಲ್ಲರೂ ಅರಿತುಕೊಂಡು ಸಮಾಜದಲ್ಲಿರುವ ಎಲ್ಲ ಉಪಪಂಗಡಗಳಿಗೆ ಸರ್ಕಾರದಿಂದ ಸೌಲಭ್ಯ ಸಿಗುವಂತೆ ಮಾಡಬೇಕಾದದ್ದು ಅಗತ್ಯವಿದೆ ಎಂದರು.
ಸಮಾಜದಲ್ಲಿ ಪಂಚಮಸಾಲಿ, ಬಣಜಿಗ ಸೇರಿದಂತೆ ಬೇರೆ ಪಂಗಡಗಳಿಗೆ ಜಂಗಮರು ಒಂದೇ ಇದ್ದರೂ ಕೆಲವರು ಆ ಪಂಗಡ ಶ್ರೇಷ್ಠ, ಇದು ಕನಿಷ್ಠ ಎಂದು ಹೇಳುತ್ತಿರುವುದು ಸರಿಯಲ್ಲ. ಉಪಪಂಗಡಗಳಲ್ಲಿರುವ ಬೇಧ ಹೋಗಿ ಎಲ್ಲ ಪಂಗಡಗಳು ಒಂದಾಗಬೇಕಿದೆ. ವೀರಶೈವದಲ್ಲಿ ಎಲ್ಲರೂ ಒಂದು, ವಿಶ್ವವೇ ಬಂಧು ಎಂಬುವದನ್ನು ನಾವು ತಿಳಿದುಕೊಳ್ಳಬೇಕೆಂದ ಅವರು ನಾವು ಮಾಡುತ್ತಿರುವ ಸಾಮಾಜಿಕ ಕಾರ್ಯಗಳಿಗೆ ಹಾನಗಲ್ಲ ಕುಮಾರಸ್ವಾಮೀಜಿಯವರು ಪ್ರೇರಣೆಯಾಗಿದ್ದಾರೆ. ಈ ನೆಲ ವಿಶ್ವಗುರು ಬಸವೇಶ್ವರರನ್ನು, ಶ್ರೀಶೈಲ ಪೀಠಕ್ಕೆ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ನೀಡುವ ಮೂಲಕ ಸಮಾಜಕ್ಕೆ ಗುರು-ವಿರಕ್ತರು ಸಮಭಾವದಿಂದ ಇರಬೇಕೆಂದು ಸಂದೇಶ ನೀಡಿದೆ ಎಂದರು.
ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತ ಶಿವಾಚಾರ್ಯರು ಮಾತನಾಡಿ, ೧೯ ನೇ ಶತಮಾನದಲ್ಲಿ ಧರ್ಮಗ್ಲಾನಿಯಾದ ಸಂದರ್ಭದಲ್ಲಿ ಹಾನಗಲ್ಲ ಕುಮಾರಸ್ವಾಮೀಜಿಯವರು ಅವತರಿಸಿ ಧರ್ಮ ರಕ್ಷಣೆ ಮಾಡಿದರು. ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ವ್ಯವಸ್ಥೆ ಚೆನ್ನಾಗಿ ಇದ್ದರೆ ಮಾತ್ರ ಸಮಾಜ ಸುಭೀಕ್ಷೆಯಾಗಿರಲು ಸಾಧ್ಯ. ಜೀವನ ಮೌಲ್ಯಗಳನ್ನು ಜಾಗೃತಿ ಮೂಡಿಸಲು ಹಾನಗಲ್ಲಶ್ರೀಗಳು ಶಿವಯೋಗ ಮಂದಿರ ಸ್ಥಾಪನೆ ಮಾಡಿದರು. ಇಂದು ಎಲ್ಲ ಶ್ರೀಗಳು ಹಾನಗಲ್ಲ ಕುಮಾರಸ್ವಾಮೀಜಿಯವರ ಕನಸು ನನಸು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.
ವೇದಿಕೆಯಲ್ಲಿ ಪ್ರವಚನಕಾರ ಕುಮಾರವಿರೂಪಾಕ್ಷ ಸ್ವಾಮೀಜಿ, ಪ್ರಭುಸಾರಂಗದೇವ ಶಿವಾಚಾರ್ಯರು, ಸಂಗನಬಸವ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯರು, ಪ್ರಭುಕುಮಾರ ಶಿವಾಚಾರ್ಯರು, ಡಾ.ಸಿದ್ದಲಿಂಗ ಶಿವಾಚಾರ್ಯರು, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಬಿ.ಕೆ.ಕಲ್ಲೂರ, ಶಿವನಗೌಡ ಬಿರಾದಾರ, ಶೇಖರಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಬಸವರಾಜ ಗೊಳಸಂಗಿ ಇತರರು ಇದ್ದರು. ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿದರು. ಅಡವೀಶ ಪೂಜ್ಯರು ಸ್ವಾಗತಿಸಿದರು. ಅಭಿನವ ಚನ್ನಬಸವ ಸ್ವಾಮೀಜಿ, ಎಚ್.ಬಿ.ಬಾರಿಕಾಯಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಿವಯೋಗಮಂದಿರ ಸಾಧಕ ರುದ್ರಮುನಿ ದೇವರು ಅವರಿಂದ ಸೂತ್ರನೇತಿ, ಯೋಗ ಪ್ರದರ್ಶನ ನಡೆಯಿತು.
ಗುರು-ವಿರಕ್ತರ ನಡುವೆ ಬೇಧ-ಭಾವ ಸಲ್ಲದು :ಶ್ರೀಶೈಲ ಜಗದ್ಗುರು
Related Posts
Add A Comment