ವ್ಯಂಗೋತ್ಸವ*
– ಶ್ರೀನಿವಾಸ ಜಾಲವಾದಿ, ಸುರಪುರ
‘ಏನಪಾ ಚಮ್ಮಕ್ ಚೆಲ್ಲು, ಏನೈತಿ ಹೊಸಾದು?’ ಕೇಳಿದ ಗರಮ್ಯಾ
‘ಏನೈತಿ? ಕ್ಯಾ ಭೀ ನಹೀ ಹೈ’ ಅಂದ ಗುಂಡ್ಯಾ
‘ಸುದ್ದಿ ಇರಲಾರದೇ ಇರಾಕ ಆಕೈತೇನು? ನಾವೇನು ಚಂದ್ರನ ಮ್ಯಾಗ ಅದಿವೇನು ಮತ್ತs?’ ಅಂದ ಗರಮ್ಯಾ
‘ಸುದ್ದಿ ಇರಲಿಲ್ಲಾಂದ್ರs, ನಮ್ಮು ಈ 24×7 ಏನು ಉದ್ದು ಹುರಿತಾವೇನಲೇ?’ ಅಂದ ಕಾಕಾ
‘ಅವುಕ್ಯಾಕ ಸುದ್ದಿ ಬೇಕು? ಅವು ಒಂದು ಇರಬಿ ಹೋಗಿತ್ತಂದ್ರs ಐದಾರು ಹೆಬ್ಬಾವು ಹೋಗ್ಯಾವು….. ಅಂತ ಬೆಳತನ್ಕ ಒದರಿ ಒದರಿ ಮಂದಿ ತಲಿ ಚಿಟ್ಟ ಹಿಡಸ್ತಾವು ಹೇಂತಿ ಒಯ್ದು’ ಅಂತ ಬೈಯ್ದ ಗುಡುಮ್ಯಾ
‘ಏ ಹಂಗ ಹೇಳ ಮತ್ತs,ಆ ನ್ಯೂಜ್ ಛಾನೆಲ್ ಆ್ಯಂಕರಗೋಳು ರಾತ್ರಿ ಮಕ್ಕಂಡಾಗ ಕನಸನಾಗನೂ ಹಂಗೇ ಒದರತಿರತಾರಂತಪೋ, ಮೊನ್ನಿ ಒಬ್ಬಕಿ ನಿರೂಪಕಿ ಪತಿ ಇದರ ಸಲಾಗೇ ಬ್ಯಾಸತ್ತು ಕೋರ್ಟಿಗಿ ಡೈವರ್ಸಕ್ಕ ಹಾಕ್ಯಾನಂತಪೋ’ ಅಂತ ಉದ್ಗಾರ ತೆಗೆದ ಬಸ್ಯಾ
‘ಮನಗಂಡ ಸುಳ್ಳ ಹೇಳ್ತಿ ಬಿಡು ನೀನು’ ಅಂದಳು ನಗುತ್ತ ರಾಣಿ
‘ಏ ಇಲ್ಲಾ, ಖರೇ ಐತಿ ಈ ಸುದ್ದಿ. ಬೇಕಾದ್ರ ಆ ಛಾನೆಲ್ದವರಿಗೆ ಫೋನ್ ಮಾಡಿ ಕೇಳ ನೀ’ ಅಂದ ಬಸ್ಯಾ
‘ಹೇ ಹಂಗಲ್ಲ ತಗಿ, ಅವರು ಡೈವರ್ಸ ತೊಗೊಳಂಗಿಲ್ಲಾ, ಅದನ ಬಿಟ್ಟು ಅವರು ಇಬ್ರೂ ಗಂಡಾ ಹೆಣ್ತಿ ಆ್ಯಂಕರೇ ಇರ್ತಾರಲಾ, ಮನಿಗಿ ಬಂದ ಮ್ಯಾಲ ಯಾರು ಹೆಚ್ಚು ಸುಳ್ಳ ಹೇಳ್ಯಾರಂತ ಅಳದು ತೂಗಿ ಲೆಕ್ಕಾ ಮಾಡಿ, ಹೆಚ್ಚ ಬೋಗಸ್ ಹೇಳಿದವ್ರಿಗಿ ಅವತ್ತಿನ ಮನಿ ಲೀಡರಶಿಪ್ ಕೊಡ್ತಾರಂತ!’ ಅಂತ ಆ ಆ್ಯಂಕರಗೊಳಕಿಂತ ಒಂದ ದೊಡ್ಡ ಬಾಂಬ್ ಒಗದ ಗುಂಡ್ಯಾ
‘ಇವು ನ್ಯೂಜ್ ಛಾನೆಲ್ಗಳಿಂದ ಭಾಳ ಮಂದಿ ಮಣ್ಣಾಗ್ಯಾರಪಾ!’ ಅಂದ ಗುಡಮ್ಯಾ
‘ಹಂಗ್ಯಾಂಗ ಆಕೈತಿ? ಮಣ್ಣ ಹ್ಯಾಂಗ ಆಕ್ಕಾರು? ಇನ್ನಾ ವರ್ಲ್ಡ್ ಫೇಮಸ್ ಆಗ್ಯಾರನ್ನೂ ಒಪ್ತೀನಿ’ ಅಂದ ಶೌರಿ
‘ಏ ಒಂದ ಎಳಿ ಸುದ್ದಿ ಇದ್ರs, ಅದನ್ನ ಹತ್ತ ಸಾವಿರ ಪಟ್ಟು ದೊಡದು ಮಾಡ್ತಾರಲೇ ಅವ್ರು, ಆ ಕೆಪ್ಯಾಸಿಟಿ ಐತಿ ಅವರಿಗಿ’ ಅಂತ ನಕ್ಕ ಗರಮ್ಯಾ
‘ಹಾಂ ಇರಲಿ, ಈಗ ನಮ್ಮ ಫೈರ್ಬ್ರ್ಯಾಂಡ್ ಯತ್ನಾಳ ಹುಲಿ ಏನ ಹೇಳೇತಿ ಗೊತೈತೇನು?’ ಅಂದ ಬಸ್ಯಾ
‘ಏನು ಹೇಳ್ಯಾರ ಸಾಹೇಬ್ರು?’ ಅಂದಳು ರಾಣಿ
‘ನಮ್ಮ ಹೈಕಮಾಂಡ ವಿರೋಧ ಪಕ್ಷದ ನಾಯಕನ್ನ ಆರಸ್ತಾರೋ ಇಲ್ಲಾ ಒಮ್ಮಿಗ್ಲೆ ಸಿಎಂ ಮಾಡತಾರೋ ನೋಡ್ಬೇಕು! ಅಂತ ಅಡ್ಡ ಗ್ಯಾಡಿ ಮ್ಯಾಗ ದೀಪ ಇಟ್ಟತಿ ಹುಲಿ’ ಅಂತ ನಕ್ಕ ಬಸ್ಯಾ
‘ಈಗ ಕೈ ಫುಲ್ ಮೇಜಾರಿಟಿ ಐತೇಲಾ? ಮತ್ತ ಇವ್ರ ಸಿಎಂ ನ್ನ ಎಲ್ಲಿ ಕುಂದ್ರಸ್ತಾರ?’ ಅಂದಳು ರಾಣಿ
‘ಏ ಸಂಕ್ರಾಂತಿಗಿ ಕೈ ಗೌರ್ಮೆಂಟ ಗಯಾಬ್ ಆಕೈತಿ ಅಂತ ಯೋಗೀಶಪ್ಪ ಹೇಳ್ಯಾನಲಾ?’ ಅಂದ ಗರಮ್ಯಾ
‘ಏನು ಅವ್ರು ಗಯಾಬ್ ಅಕ್ಕಾರೋ, ಏನು ನಾವು ಮಳ್ಳ ಮಂದಿ ಮತದಾರರದಿವಲಾ, ನಾವ ಆಕ್ಕಿವೋ ಕೌನ್ ಜಾನೆ ?’ ಅಂದ ಗುಡುಮ್ಯಾ
‘ಈ ಕಾವೇರಿ, ಗ್ಯಾರಂಟಿ, ಜಾತಿ ಸ್ಟೇಟ್ಮೆಂಟ್, ಮಹಿಳಾ ಮೀಸಲಾತಿ ….. ಎಲ್ಲಾ ಸೇರಿ ಟಗರು ಬಂಡೆಕ್ಕ ತೆಲಿ ಗುದ್ದಿದಂಗಾಗೇತಿ!’ ಅಂತ ನಕ್ಕಳು ರಾಣಿ
‘ಈ ಡಿಸಿಎಂ ಫೈಟಿಂಗ್,ಶಾಮನೂರ ಲಿಂಗಾಯತ ಸ್ಟೇಟ್ಮೆಂಟ್, ಹರಿಪ್ರಸಾದ ಗರ್ದಿಗಮ್ಮತ್ನ್ಯಾಗ ಎಲ್ಲಾ ಗದ್ಲ ಹಿಡದೇತಿ’ ಅಂದ ಬಸ್ಯಾ
‘ವಿಶ್ವನಾಥ ಅಡ್ಡ ಹೋಗಿದ್ದಕ್ಕ ದಾವಣಗೇರಿ ಧಣಿ ಗರಂ ಆಗ್ಯಾರಲಾ?’ ಅಂದ ಕಾಕಾ
‘ಹೋಯಂದ ಮತ್ತs, ಈ ಬಾಂಬೆ ಬಾಯ್ಸಗಳಿಗೆ ತಲಿ ಕೆಟ್ಟಂಗ ಆಗೇತಿ, ಒಂದೊಂದು ಒಂದೊಂದು ದಿಕ್ಕಿಗಿ ಮಾರಿ ಮಾಡ್ಯಾವು’ ಅಂದ ಗುಡುಮ್ಯಾ
‘ಅಲ್ಲಾ ಈ ಹಳ್ಳಿ ಹಕ್ಕಿ ಯಾವ ಪಾರ್ಟಿ?’ ಅಂದ ಕಾಕಾ
‘ ಅಂವಾ ಟಗರ ಹಿಂದ ಅಲಿತಾನು, ಕೈಯಾಗರೇ ಕಮಲ ಹಿಡದಾನು!’ ಅಂತ ನಕ್ಕ ಶೌರಿ
‘ಮದ್ಲ ನೆಟ್ಟಗೆ ಆರ್ಸಿ ಬರೂದ ನೋಡು ನಂಗೇನ ಹೇಳ್ತಿ ನೀ ಅಂತ ಧಣಿ ಆವಾಜ್ ಹಾಕ್ಯಾನ ಹಕ್ಕಿಗೆ’ ಅಂತ ನಕ್ಕ ಗರಮ್ಯಾ
‘ಮತ್ತs ತೆನಿ ಹೋಗಿ ಕಮಲದಾಗ ಸೇರಿಕೊಂಡೇತಿ?’ ಅಂದಳು ರಾಣಿ
‘ಹೋಯಿಂದು,ಅದಕ್ಕs ತೆನಿ ಅಧ್ಯಕ್ಷ ನನಗ ಹೇಳೇ ಇಲ್ಲಾ ಅಂತ ಗರಂ ಆಗ್ಯಾನ’ ಅಂದ ಬಸ್ಯಾ
‘ಏನ ಗರಂ ಆಗಿ ಏನ ಮಾಡ್ತಾನ? ದೊಡ್ಡಗೌಡ್ರು ಕುಮಾರಣ್ಣ ತಿರಿಗಿ ಉಡ್ಕಿ ಮಾಡ್ಕಂಡs, ಹೊಸಾ ತಾಳಿ ಕಟಗೊಂಡ ಬಂದಾರ ಡೆಲ್ಲಿಗಿ ಹೋಗಿ’ ಅಂದ ಕಾಕಾ
‘ ಅಂದ್ರs, ಈ ಅಧ್ಯಕ್ಷ ಬರೀ ಬಸವಣ್ಣನ ವಚನ ಹೇಳಿದ್ದಷ್ಟ ಖರೇ ಆತೇನು?’ ಅಂದಳು ರಾಣಿ
‘ತೆನಿ ಅಧ್ಯಕ್ಷ ಏನೇನೋ ಆಸೆ ಇಟ್ಕಂಡ ಬಂದಿದ್ದ, ತೆನೆಗೆನೇ ಕುರ್ಚಿ ಸಿಗತೈತಿ,ಕುಮ್ಮಿನೇ ಸಿಎಂ, ನಾನೇ ಹೋಂ! ಅಂತೆಲ್ಲಾ, ಅದು ತಿರುಕನ ಕನಸಾತು, ಮತ್ತ ಕುಮ್ಮಿ ಹೋಗಿ ಎಡ್ಡಿ ಬಾಯಾಗ ಬಿತ್ತು!’ ಅಂದ ನಕ್ಕು ಗರಮ್ಯಾ
‘ಎಲ್ಲಾರೂ ಎಲ್ಲಾರ ಹತ್ತರ ಹೋಗ್ಯಾರ, ಆದ್ರೂ ಎಲ್ಲಾರೂ ನಾವೇ ಸಾಚಾ ಅಂತಾರ’ ಅಂದ ಕಾಕಾ
‘ಹಂ ನಡ್ರೆಪಾ ಎಲ್ಲಾರೂ ಚಾ ಕುಡದು ಬಿಗ್ ಬಾಸ್ ನೋಡಾಕ ಹೋಗಾಮಿ, ಅಲ್ಲಿನೂ ಮನಗಂಡ ಐಲ ಗಿರಾಕಿ ಬಂದಿರ್ತಾವು’ ಅಂತ ನಕ್ಕ ಗುಡುಮ್ಯಾ
‘ಒಂದ ಸಲ ಬಿಗ್ ಬಾಸಕ್ಕ ಈ ಎಲ್ಲಾ ರಾಜಕೀಯ ವ್ಯಂಗಚಿತ್ರಗಳನ್ನ ಹಾಕಿ ಆಟಾ ಆಡಸ್ಬೇಕು, ಅದರ ಮಜಾನೇ ಬ್ಯಾರೇ ಅಲಾ’ ಎಂದಳು ರಾಣಿ
‘ಆವಾಗ ಇವರೇ ಬಿಗ್ ಬಾಸ್ ಆಕ್ಕಾರು, ಕಿಚ್ಚನೂ ನಾ ಒಲ್ಲೇಪಾ ಇವ್ರ ಸಾವಾಸಾ ಅಂತ ಕೈ ಮುಗಿತಾನು!’ ಅಂದ ಗರಮ್ಯಾ
‘ಕೈ ಅಷ್ಟೇ ಯಾಕ,ಕಮಲದ ತೆನಿಗೂ ಗುಡ್ ಬಾಯ್ ಹೇಳಬೇಕಾಕೈತಿ!’ ಅಂದ ಶೌರಿ
‘ನಡ್ರಿ ಎಲ್ಲಾರೂ, ಅಂವಾ ಯಾವನೋ ಸಾಹಿತಿಗಳಿಗೆ ಬೆದರಕಿ ಪತ್ರಾ ಬರದವ ಸಿಕ್ಕಾನಂತ ಅವ್ನಿಗೆ ಛೀಮಾರಿ ಹಾಕಿ, ಹಂಗೇ ಸರಿಗಮಪ ಕ್ಕ ಹೋಗಿ ದಸರಾಕ್ಕ ಚಾಲನೆ ಕೊಡಲಿರುವ ಮಹಾಗುರು ಹಂಸಲೇಖಾ ಅವರಿಗಿ ಭೆಟ್ಟಿ ಆಗಿ ಶುಭಾಶಯ ಹೇಳಿ ‘ಜೈ ದಸರಾ ಜೈ ಕರ್ನಾಟಕ’ ಅಂತ ಜೈಕಾರ ಹಾಕೂಣಂತ ಬರ್ರಿ’ ಅಂತ ಕಾಕಾ ಎಲ್ಲಾರನು ಕರಕೊಂಡ ಹೊಂಟ ಮಹಾತ್ಮಾಜಿಯ ಅಂತಃಕರಣಿಯ ಯಾತ್ರೆ ಹಂಗ !