ಕಾರ್ಮಿಕ ಸಚಿವ ಸಂತೋಷ ಲಾಡ್ ಭರವಸೆ
ವಿಜಯಪುರ: ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗಾಗಿ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಬಹಳಷ್ಟು ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಕಾರ್ಮಿಕ ಖಾತೆ ಸಚಿವರಾದ ಸಂತೋಷ ಲಾಡ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಾರ್ಮಿಕ ಸಂಘಟನೆಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗಾಗಿ ಈಗಾಗಲೇ ಪೋರ್ಟಲ್ ಮೂಲಕ ಅರ್ಜಿಗಳು ಸ್ವೀಕೃತವಾಗಿದ್ದು, ನೈಜ ಫಲಾನುಭವಿಗಳಿಗೆ ಶಿಷ್ಯವೇತನ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಸೂಕ್ತ ಪರಿಶೀಲನೆ ನಡೆಸಿ ೭ ಲಕ್ಷ ಅರ್ಹರಿಗೆ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಮೊದಲಿದ್ದ ಕಾರ್ಮಿಕ ಬಂಧು ಹೊಸ ವ್ಯವಸ್ಥೆ ಅಳವಡಿಸಿ ಪರಿಶೀಲಿಸಿ ಅರ್ಹ ಫಲಾನುಭವಿಗಳ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಕಾರ್ಮಿಕ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಹೆರಿಗೆ ಭತ್ಯೆ ನೀಡುವಾಗ ನೈಜ ಫಲಾನುಭವಿಗಳ ಪರಿಶೀಲನೆ ಮಾಡಿ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ನೈಜ ಫಲಾನುಭವಿಗಳಿಗೆ ಲಾಭ ದೊರೆಯಲು ಸಹಕಾರಿಯಾಗುತ್ತದೆ. ಗೃಹ ಕಾರ್ಮಿಕರಾದ ಗಾರ್ಡನರ್, ಮನೆಗೆಲಸ ಮಾಡುವವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಮ್ಯಾಕ್ಸಿಕ್ಯಾಬ್, ಅಟೋ ಸ್ಟ್ಯಾಂಡ್ ಸೇರಿದಂತೆ ಪ್ರತ್ಯೇಕವಾಗಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಲು ಸೂಕ್ತ ವ್ಯವಸ್ಥೆಗೆ ಜಾಗೆ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಅವರು, ಲ್ಯಾಪಟಾಪ್ ವಿತರಣೆಯಲ್ಲಿ ನೈಜ್ ಫಲಾನುಭವಿಗಳಿಗೆ ಗುರುತಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕ ಯೋಜನೆ ರೂಪಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆದಾಯ ಕ್ರೋಢೀಕರಣ ಮಾಡುವ ದಿಸೆಯಲ್ಲಿ ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸೆಸ್‌ನ್ನು ಹೆಚ್ಚು ಕ್ರೋಢಿಕರಿಸಬೇಕು ಇದರಿಂದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸೆಸ್‌ನ್ನು ಆಕರಿಸಲು ಸಹ ಕ್ರಮ ವಹಿಸಲಾಗುತ್ತಿದ್ದು, ನೈಜ ಕಾರ್ಮಿಕರು ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಲಾಭ ಪಡೆಯಲು ಯಾವುದೇ ಮಧ್ಯವರ್ತಿಗಳ ಮೊರೆಹೋಗದೇ ನೇರವಾಗಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲ ಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಕಾರ್ಯದರ್ಶಿ ಶ್ರೀಮತಿ ಭಾರತಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ , ,ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಜಿ.ಖೈನೂರ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.