ಮಾನವ ಹಕ್ಕುಗಳ ಬಗ್ಗೆ ಅರಿವು ಮತ್ತು ರಕ್ಷಣೆ ಕಾರ್ಯಾಗಾರದಲ್ಲಿ ಎಎಸ್ಪಿ ಶಂಕರ ಮಾರಿಹಾಳ ಅಭಿಮತ
ವಿಜಯಪುರ: ಮಾನವ ಹಕ್ಕುಗಳು ಪ್ರತಿಯೊಬ್ಬರಿಗೆ ದಯಪಾಲಿಸಲಾದ ಅತ್ಯಂತ ಮೂಲಭೂತ ಹಕ್ಕುಗಳಾಗಿವೆ. ಪ್ರತೀ ವ್ಯಕ್ತಿಗೂ ಹುಟ್ಟಿನಿಂದ ಅವರ ಮರಣದವರೆಗೂ ಕೆಲವು ಹಕ್ಕುಗಳು ಮತ್ತು ಸ್ವಾತಂತ್ರ್ಯ ಇರುತ್ತದೆ; ಅವುಗಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ನುಡಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ
ನಿರ್ದೇಶನದಂತೆ, ನಗರ ಪೋಲಿಸ ಉಪವಿಭಾಗದ ಡಿಎಸ್ಪಿ ಅವರು ನಗರದ ಪೊಲೀಸ ಚಿಂತನ ಸಭಾಂಗಣದಲ್ಲಿ ಪೋಲಿಸ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಿದ್ದ ಒಂದು ದಿನದ ಮಾನವ ಹಕ್ಕುಗಳ ಬಗ್ಗೆ ಅರಿವು ಮತ್ತು ರಕ್ಷಣೆ ಕಾರ್ಯಾಗಾರ ಮತ್ತು ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ ಸಿಬ್ಬಂದಿ ಮಾನವ ಹಕ್ಕುಗಳ ಅರಿತುಕೊಂಡು, ಸಾರ್ವಜನಿಕರ ಜೊತೆ ಅವರ ಹಕ್ಕುಗಳ ಉಲ್ಲಂಘನೆಯಾಗದಂತೆ ನಡೆದುಕೊಂಡು ಸಮಾಜದ ಸ್ವಾಸ್ತ್ಯ ಕಾಪಾಡಬೇಕು. ಅಪರಾಧ ತಡೆಗಟ್ಟುವಿಕೆ ಮತ್ತು ಪತ್ತೆ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಅಗತ್ಯವಿರುವವರಿಗೆ ಮಾನವೀಯ ಸಹಾಯವನ್ನು ಸಲ್ಲಿಸುವುದು ಮಾನವ ಹಕ್ಕುಗಳ ಪ್ರಚಾರ ಮತ್ತು ರಕ್ಷಣೆ ಎಂದು ನುಡಿದರು.
ಕಾರ್ಯಕ್ರಮದ ನಿರ್ಣಾಯಕರಾಗಿ ಆಗಮಿಸಿದ ಕರ್ನಾಟಕ ಸರಕಾರದ ಯುವಸಬಲೀಕರಣ ಸೇವೆಗಳ ಸಲಹಾ ಸಮಿತಿ ಸದಸ್ಯ ಡಾ.ಜಾವಿದ ಜಮಾದಾರ ಮಾತನಾಡಿ, ಮಾನವ ಹಕ್ಕುಗಳ ಸಂಬಂಧಿಸಿದ ವಿಷಯಗಳ ಬಗ್ಗೆ ಪೊಲೀಸ ಸಿಬ್ಬಂದಿಗೆ ಏರ್ಪಡಿಸಲಾದ ಈ ತರಬೇತಿಯು ಮಾನವ ಹಕ್ಕುಗಳನ್ನು ಕಾಪಾಡಲು ಪೊಲೀಸರ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದರು.
ವಿಜಯಪುರ ಉಪವಿಭಾಗದ ಪೊಲೀಸ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಮಾತನಾಡಿ, ಪೊಲೀಸರು ಮಾನವ ಹಕ್ಕುಗಳ ಬಗ್ಗೆ ಅರಿತುಕೊಂಡು ಕಾರ್ಯನಿರ್ವಹಿಸದೇ ಜನಸ್ನೇಹಿಯಾಗಲು ಸಾಧ್ಯವಿಲ್ಲ. ಕಾನೂನು ಬಾಹೀರ ಕೃತ್ಯಗಳ ವಿರುದ್ದ ಕಾನೂನು ಚೌಕಟ್ಟಿನಲ್ಲಿ ಎಲ್ಲ ವ್ಯಕ್ತಿಗಳನ್ನು ರಕ್ಷಿಸುವ ಹಾಗೂ ಶಿಷ್ಟರನ್ನು ಶಿಕ್ಷಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕೆಂದರು.
ನಿರ್ಣಾಯಕರಾದ ನಿವೃತ್ತ ಪ್ರಾಚಾರ್ಯ ಡಾ. ಎಚ್.ಎಂ. ಮುಜಾವರ ಮಾತನಾಡಿದರು. ಪೊಲೀಸ ಸಿಬ್ಬಂದಿಗಳಿಂದ ಮಾನವ ಹಕ್ಕುಗಳ ರಕ್ಷಣೆ ಮತ್ತು ಜವಾಬ್ದಾರಿ ಕುರಿತ ಭಾಷಣ ಸ್ಪರ್ಧೆಯಲ್ಲಿ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಮೆಂಡೆಗಾರ ಪ್ರಥಮ ಸ್ಥಾನ, ಗಾಂಧಿ ಚೌಕ ಪೊಲೀಸ್ ಠಾಣಾ ಎಂ.ಆರ್. ಸಿಂಧೆ ದ್ವಿತೀಯ ಸ್ಥಾನ ಹಾಗೂ ಗೋಲಗುಂಬಜ ಠಾಣಾ ಮಹಾದೇವ ಮಾನೆ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ವಿವಿಧ ಠಾಣೆಯ ಹಾಗೂ ಜಿಲ್ಲಾ ಸಶಸ್ತ್ರ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ತಿತರಿದ್ದರು.
ಗಾಂಧಿ ಚೌಕ ಪೊಲೀಸ ಇನ್ಸಪೆಕ್ಟರ್ ಪ್ರದೀಪ ತಳಕೇರಿ ಸ್ವಾಗತಿಸಿದರು. ಗೋಲಗುಮ್ಮಜ ಸರ್ಕಲ್ ಪೊಲೀಸ ಇನ್ಸಪೆಕ್ಟರ್ ಮಲ್ಲಯ್ಯ ಮಠಪತಿ ವಂದಿಸಿದರು. ಪಿ.ಎಸ್.ಐ. ರವಿ ಯಡವಣ್ಣವರ ಕಾರ್ಯಕ್ರಮ ನಿರೂಪಿಸಿದರು.