ಕಾವೇರಿ ಪ್ರಾಧಿಕಾರದ ತೀರ್ಪು ಖಂಡಿಸಿ ಹೋರಾಟ ಮುಂದುವರಿಕೆ | ಮು.ಚಂದ್ರು ಸ್ಪಷ್ಠನೆ
ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ತೀರ್ಪು ಖಂಡಿಸಿ ಹೋರಾಟ ಮುಂದುವರಿದಿದ್ದು, ಸಮಸ್ಯೆ ಬಗೆಹರಿಯುವ ತನಕ ಪ್ರತಿನಿತ್ಯ ಮೌನ ಧರಣಿ ಮುಂದುವರಿಸಲು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ರೈತ ಮುಖಂಡ ಕುರುಬೂರು ಚಂದ್ರಶೇಖರ್ ಅವರ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತೀರ್ಮಾನಿಸಿದೆ.
ಗಾಂಧಿ ಜಯಂತಿಯ ಅಂಗವಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ನಡೆದ ಮೌನ ಧರಣಿ ಬಳಿಕ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಘಟನೆಗಳು ಸರದಿಯಂತೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ‘ಕಾವೇರಿ ನಮ್ಮದು’ ಧರಣಿ ಸತ್ಯಾಗ್ರಹ ನಡೆಸಲಿವೆ.
ಶಿಸ್ತುಬದ್ಧ ಹೋರಾಟದ ದೃಷ್ಟಿಯಿಂದ ನಾಲ್ವರನ್ನು, ಎಎಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್, ಹೋರಾಟಗಾರರಾದ ಗುರುದೇವ್ ನಾರಾಯಣ್, ಹತ್ತಳ್ಳಿ ದೇವರಾಜ್, ಕೆ.ಕೆ.ಮೋಹನ್ ಅವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.
ಧರಣಿ ವಿವರ
ಅಕ್ಟೋಬರ್ 3: ಕನ್ನಡ ಚಳುವಳಿ ಕೇಂದ್ರ ಸಮಿತಿ ಗುರುದೇವ್ ನಾರಾಯಣ್ ನೇತೃತ್ವದಲ್ಲಿ ಧರಣಿ
ಅಕ್ಟೋಬರ್ 4: ಅಮ್ ಆದ್ಮಿ ಪಕ್ಷದ ವತಿಯಿಂದ ಚಳವಳಿ
ಅಕ್ಟೋಬರ್ 5: ಜಯ ಕರ್ನಾಟಕ ಜನಪರ ವೇದಿಕೆ ಜೈ ಶ್ರೀನಿವಾಸ್ ನೇತೃತ್ವದಲ್ಲಿ ಹೋರಾಟ
ಅಕ್ಟೋಬರ್ 6: ಕನ್ನಡ ಪಕ್ಷದ ಪುರುಷೋತ್ತಮ್ ನೇತೃತ್ವ ಕಾರ್ಯಕರ್ತರಿಂದ ಪ್ರತಿಭಟನೆ
ಅಕ್ಟೋಬರ್ 8: ರಾಜ್ಯ ಕಬ್ಬು ಬೆಳೆಗಾರ ಸಂಘ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಸತ್ಯಾಗ್ರಹ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವತಿಯಿಂದ ಸೆಪ್ಟೆಂಬರ್ 26ರಂದು ನಡೆದ ಬೆಂಗಳೂರು ಬಂದ್ ಯಶಸ್ವಿಯಾದ ಬಳಿಕ ಸೆಪ್ಟೆಂಬರ್ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಕ್ಕೋತ್ತಾಯಗಳನ್ನು ಮಾಡಿದ್ದರು. ಆದರೆ ಇದುವರೆಗೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲದ ಕಾರಣ ಸೋಮವಾರ ಗಾಂಧಿ ಜಯಂತಿ ಆಚರಣೆ ಸಂದರ್ಭ ಮಹಾತ್ಮ ಗಾಂಧಿಜೀಯವರನ್ನು ಸ್ಮರಿಸುತ್ತ ಮೌನ ಧರಣಿ ನಡೆಸಿದರು. ರಾಜ್ಯ ಸರ್ಕಾರ ತ್ವರಿತವಾಗಿ ತಮಿಳುನಾಡಿಗೆ ಹರಿಯುವ ನೀರನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಬೇಕು ಎಂದು ಎಚ್ಚರಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಸೇರಿದಂತೆ ಅನೇಕ ಮುಖಂಡರು, ಹೋರಾಟಗಾರರು, ಕಾರ್ಯಕರ್ತರು ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯದ ಫಲಕಗಳನ್ನು ಪ್ರದರ್ಶಿಸಿದರು.
ಮೂರು ಪ್ರಮುಖ ಹಕ್ಕೊತ್ತಾಯಗಳು
1) ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು.
2) ವಿಶೇಷ ವಿಧಾನ ಮಂಡಲದ ಅಧಿವೇಶನ ಕರೆದು ಸಂಕಷ್ಟ ಸೂತ್ರ ಜಾರಿ ಆಗುವ ತನಕ ನೀರು ಬಿಡುವುದಿಲ್ಲ ಎನ್ನುವ ನಿರ್ಣಯ ಕೈಗೊಳ್ಳಬೇಕು
3) ಮಳೆ ಹೆಚ್ಚು ಬಂದಾಗ ನೀರು ಸಂಗ್ರಹಿಸಿಕೊಳ್ಳಲು ಮೇಕೆದಾಟು ನಿರ್ಮಾಣ ತಕ್ಷಣ ಕಾರ್ಯಾ ಆರಂಭ ಮಾಡಬೇಕು.