ಶಾಸಕ ಯತ್ನಾಳರ ವಿರುದ್ಧ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ವಾಗ್ದಾಳಿ
ವಿಜಯಪುರ: ನಗರದಲ್ಲಿ ಇತ್ತೀಚೆಗೆ ಬ್ಯಾನರ್ ಹರಿದ ವಿಷಯ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಭೋಗಸ್ ಮತದಾನ ಮಾಡಿರುವುದನ್ನು ಸಿಬಿಐ ತನಿಖೆ ಮಾಡಿಸಬೇಕೆಂದು ನಗರ ಮತಕ್ಷೇತ್ರದ 2023ರ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರೀಫ್ ಆಗ್ರಹಿಸಿದ್ದಾರೆ.
ಭಾನುವಾರ ಮಾತನಾಡಿದ ಅವರು, ನಗರ ಶಾಸಕರು ಅನಾವಶ್ಯಕವಾಗಿ ಪಾಕಿಸ್ತಾನ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಗರದಲ್ಲಿ ಚಿಂಚೋಳಿ, ಬೀದರ್, ನಾಗಠಾಣ, ಸೇಡಂ ಹಲವಾರು ಕಡೆಯಿಂದ ಜನರನ್ನು ಕರೆಯಿಸಿ ಖೊಟ್ಟಿ ಮತದಾನ ಮಾಡಿಸಿ ಗೆದ್ದಿರುವುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ಎಲ್ಲ ಸಾಕ್ಷಿ ಸಮೇತ ಪ್ರಕರಣ ದಾಖಲಿಸಿದ್ದೇನೆ. ದಿನ ಬೆಳಗಾದರೆ ಸಾಕು ಶಾಸಕರ ಬಾಯಿಂದ ಬರೀ ಪಾಕಿಸ್ತಾನದ ಮಾತುಗಳೇ ಕೇಳಿ ಬರುತ್ತಿದ್ದು, ಅಭಿವೃದ್ಧಿ ಕಡೆ ಮೊದಲು ಗಮನ ಕೊಡಬೇಕು. ನಗರದ ಟಿಪ್ಪು ಸುಲ್ತಾನ ವೃತ್ತ, ಮನಗೂಳಿ ಅಗಸಿ ಮೇಲೆ ಪಾಕಿಸ್ತಾನ ದ್ವಜ ಹಾರಿಸಲು ಹಚ್ಚಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಧೈರ್ಯವಿದ್ದರೆ ಸಿಬಿಐಗೆ ವಹಿಸಿ ನೋಡೋಣ ಎಂದು ಸವಾಲೆಸೆದರು.
ಇದೇ ವಿಷಯವಿಟ್ಟುಕೊಂಡು ರ‍್ಯಾಲಿ ನಡೆಸಿದ ಸಂದರ್ಭದಲ್ಲಿ ಅದೆ ಪ್ಯಾಟರ್ನ್ ಪಾಕಿಸ್ತಾನ ದ್ವಜ ತಂದು ಸುಟ್ಟಿದವರು ಯಾರು ಎಂಬುದು ಗೊತ್ತಾಗಬೇಕು. ನಗರ ಶಾಸಕರು ಹಣ ಹಂಚಿಲ್ಲ, ಭೋಗಸ್ ಮತದಾನ ಮಾಡಿಸಿಲ್ಲ ಎಂದು ಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಆಗ್ರಹಿಸಿದರು.
ಕೇವಲ ಹಿಂದೂ ಮುಸ್ಲಿಂ ಎಂಬ ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡುವುದು ನಿಮ್ಮ ಕೆಲಸವಾಗಿದೆ. ಬ್ಯಾನರ್ ಹರಿಸುವಷ್ಟು ಚಿಲ್ಲರೆ ಕೆಲಸ ನಾನು ಮಾಡುವುದಿಲ್ಲ ಅಂತಹ ಬುದ್ದಿಯೂ ಇಲ್ಲ. ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಕೈಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದೇನೆ. ನಗರ ಶಾಸಕರು ನಮ್ಮ ಬಗ್ಗೆ ಹಾಗೂ ಮುಸ್ಲಿಂರ ಬಗ್ಗೆ ಮಾತನಾಡಿದರೆ ಇನ್ನು ಮೇಲೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.