೧೧೪ ಗೋವುಗಳಿದ್ದ ಮೂರು ವಾಹನಗಳನ್ನು ತಡೆದ ಹಿಂದು ಸಂಘಟನೆಗಳ ಕಾರ್ಯಕರ್ತರು
ಇಂಡಿ: ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಮೂರು ವಾಹನಗಳನ್ನು ತಡೆದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಬಂಧಿತ ಚಾಲಕರನ್ನು ಮಹಾರಾಷ್ಟ್ರದ ಅಕಲೂಜ್‌ನ ಫರೀದ ತಂದೆ ಮಹ್ಮದ ಶೇಖ್, ಅಕಲೂಜ್‌ನ ಲೋಹಿದ್ ಶಾಕೀರ ಶೇಖ್ ಎಂದು ಗುರುತಿಸಿದ್ದು ಓರ್ವ ಚಾಲಕ ಪರಾರಿಯಾಗಿದ್ದಾನೆ.
ಎಂಹೆಚ್ ೧೩ ಸಿಯು ೧೦೫೭, ಎಂಹೆಚ್ ೧೨ ಪಿಕ್ಯೂ ೭೫೭೩, ಎಂಹೆಚ್ ೧೩ ಸಿಯು ೧೩೨೩ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂಡಿ ಪಟ್ಟಣದಿಂದ ಎರಡು ಕಿ.ಮೀ ದೂರದಲ್ಲಿರುವ ಇಟ್ಟಂಗಿ ಭಟ್ಟಿ ಸಮೀಪದಲ್ಲಿ ಮೂರು ವಾಹನಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಹಿಂದೂಪರ ಸಂಘಟನೆಗಳ ಕೆಲ ಕಾಯಕರ್ತರು ಸ್ಥಳಕ್ಕೆ ಭೇಟಿ ನೀಡಿ ವಾಹನ ಪರಿಶೀಲಿಸಿದ್ದು, ಅದರಲ್ಲಿ ಗೋವುಗಳು ಹಾಗೂ ಕರುಗಳು ಇರುವುದು ಕಂಡು ಬಂದಿದ್ದು, ಕೂಡಲೇ ಕಾರ್ಯಕರ್ತರು ಇಂಡಿ ಶಹರ ಠಾಣೆಗೆ ಮಾಹಿತಿ ನೀಡಿ ಠಾಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಗೋವುಗಳನ್ನು ಕಗ್ಗೋಡ ಗೋಶಾಲೆಗೆ ರವಾನೆ ಮಾಡಿದರು.
ಒಟ್ಟು ೧೧೪ ಹಸುಗಳಿದ್ದು ಅದರಲ್ಲಿ ೪೪ ಹಸುಗಳು ಸಾವನ್ನಪ್ಪಿದ್ದು ೭೦ ಜೀವಂತ ಹಸು ಹಾಗೂ ಕರುಗಳಿದ್ದವು.
ಗೋಶಾಲೆಗೆ ಪಶು ವೈದ್ಯ ಮಲ್ಲಿಕಾರ್ಜುನ ಹತ್ತರಕಿಹಾಳ ಭೇಟಿ ನೀಡಿ ಗಾಯಗೊಂಡ ಹಸು-ಕರುಗಳಿಗೆ ಉಪಚಾರ ಮಾಡಿದರು.
ಸಿಪಿಐ ರತನಕುಮಾರ ಜೀರಗ್ಯಾಳ ಹಿಂದೂ ಕಾರ್ಯಕರ್ತರೊಂದಿಗೆ ಕಗ್ಗೋಡದ ಗೋಶಾಲೆಗೆ ಗೋವು ತುಂಬಿದ ವಾಹನಗಳನ್ನು ಕರೆದೊಯ್ದು ಗೋಶಾಲೆಯಲ್ಲಿ ಹಸು-ಕರುಗಳನ್ನು ಬಿಟ್ಟರು.
ಈ ಸಂದರ್ಭದಲ್ಲಿ ಈರಣ್ಣ ಸಿಂದಗಿ, ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಪೂಜಾರಿ, ಶಂಕರ ಹಲವಾಯಿ, ಅಭೀಷೇಕ ಸಿಂದಗಿ, ನೇತಾಜಿ ಪವಾರ, ಪವನ ಮಠ, ಪ್ರಸಾದ ಮಠ, ಸಿದ್ದು ಸೂರ್ಯವಂಶಿ, ವಿನೋದ ಸೂರ್ಯವಂಶಿ ಸೇರಿದಂತೆ ಹಲವರು ಇದ್ದರು.
ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![IMG 20231003 WA0008](https://udayarashminews.com/wp-content/uploads/2023/10/IMG-20231003-WA0008-695x1024.jpg)