ದೇವರಹಿಪ್ಪರಗಿ: ಗಾಂಧೀಜಿ ಹಾಗೂ ಶಾಸ್ತ್ರಿಜಿಯವರ ಜನ್ಮದಿನದ ಪ್ರಯುಕ್ತ ಜರುಗಿದ ರಂಗೋಲಿ ಸ್ಪರ್ಧೆಯಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಪಾಲ್ಗೊಂಡು ರಂಗೋಲಿ ಬಿಡಿಸಿ ನೋಡುಗರ ಗಮನ ಸೆಳೆದರು.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತದ ರಾಜ್ಯಹೆದ್ದಾರಿ ೪೧ರಲ್ಲಿ ಬೆಳಿಗ್ಗೆ ಮಹನೀಯರ ಜನ್ಮದಿನ ಹಾಗೂ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರ ಅವರ ಶ್ರಮದಾನ ಮತ್ತು ಇಂಡಿಯನ್ ಸ್ವಚ್ಛತಾ ಲೀಗ್ ಕಾರ್ಯಕ್ರಮದ ಪ್ರಯುಕ್ತ ಆರಂಭಗೊಂಡ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಸರ್ಕಾರಿ ಉರ್ದುಪ್ರೌಢಶಾಲೆ, ಬಿಎಲ್‌ಡಿಇ, ಮಹರ್ಷಿ ವಾಲ್ಮೀಕಿ, ಸಿದ್ಧೇಶ್ವರ ಸ್ವಾಮೀಜಿ, ಎಬಿ ಸಾಲಕ್ಕಿ, ಚೈತನ್ಯ ಪ್ರೌಢಶಾಲೆಗಳ ೨೮ ಕ್ಕೂ ಹೆಚ್ಚು ವಿದ್ಯಾರ್ಥಿನೀಯರು ಭಾಗವಹಿಸಿ ಸ್ವಚ್ಛ ಭಾರತ ಅಭಿಯಾನ, ಗಾಂಧೀಜಿ, ಪರಿಸರದ ಜಾಗೃತಿ, ರಾಷ್ಟçಧ್ವಜ ಸೇರಿದಂತೆ ವಿವಿಧ ಬಗೆಯ ಬಣ್ಣಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಿದರು.
ಪ್ರಥಮ ಸ್ಥಾನವನ್ನು ಸರ್ಕಾರಿ ಉರ್ದುಪ್ರೌಢಶಾಲೆ ವಿದ್ಯಾರ್ಥಿನಿ ಸ್ವಾಲಿಯಾ ಮಸಳಿ, ದ್ವೀತಿಯ ಹಾಗೂ ತೃತಿಯ ಸ್ಥಾನಗಳನ್ನು ಕ್ರಮವಾಗಿ ಎಬಿ ಸಾಲಕ್ಕಿ ಪ್ರೌಢಶಾಲೆಯ ಸೃಷ್ಠಿ ಸಾಲವಾಡಗಿ, ರಕ್ಷಿತಾ ಚವ್ಹಾಣ ಪಡೆದರು. ನಂತರ ವಿಜೇತ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿನೀಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಮಸಬಿನಾಳ, ಶಾಂತಯ್ಯ ಜಡಿಮಠ, ಸುಮಂಗಲಾ ಸೆಬೇನವರ, ಕಾಶೀನಾಥ ಬಜಂತ್ರಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಪ್ರಕಾಶ ಮಲ್ಲಾರಿ, ವಿನೋದ ಚವ್ಹಾಣ, ಕಾಶೀನಾಥ ತಳಕೇರಿ, ಮುತ್ತುರಾಜ್ ಹಿರೇಮಠ ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿ ಇದ್ದರು.