ಮತ ಖರೀದಿ ಆರೋಪ | ಚುನಾವಣಾ ಆಯೋಗಕ್ಕೆ ದೂರು | ಮಾಜಿ ಸಚಿವ ಸಿಎಂ ಇಬ್ರಾಹಿಂ ಆರೋಪಕ್ಕೆ ಕಾನೂನು ಕ್ರಮಕ್ಕೆ ಒತ್ತಾಯ
ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಗಳನ್ನು ಖರೀದಿಸಿದ್ದಾರೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರು ಆರೋಪಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಬಿಜೆಪಿ ನಾಯಕರ ನಿಯೋಗ ಗುರುವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಾಜಿ ಎಂಎಲ್‌ಸಿ ಮತ್ತು ಮುಖ್ಯ ವಕ್ತಾರ ಸಿ.ಎನ್. ಅಶ್ವತ್ಥ ನಾರಾಯಣ್, ಮಾಜಿ ಎಂಎಲ್‌ಸಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ್ ಮತ್ತು ರಾಜ್ಯ ಕಾನೂನು ಕೋಶದ ಸಂಚಾಲಕ ವಸಂತ ಕುಮಾರ್ ಅವರನ್ನೊಳಗೊಂಡ ಬಿಜೆಪಿ ನಿಯೋಗ ಇಂದು ಬೆಂಗಳೂರಿನಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ 7 ಕೋಟಿ ರೂ. ಹಂಚಬೇಕೆಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿರುವ ವಿಡಿಯೋ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಸಿಎಂ ಇಬ್ರಾಹಿಂ ಅವರು ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ, 2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಾನು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಚಿಮ್ಮನಕಟ್ಟಿ 3,000 ಮತಗಳನ್ನು ಖರೀದಿಸಿದ್ದೇವೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದರು. ನಾವು ಹಣವನ್ನು ಸಾಲವಾಗಿ ಪಡೆದು 3,000 ಮತಗಳನ್ನು ಖರೀದಿಸಿದ್ದೇವೆ. ಮತಗಳನ್ನು ಖರೀದಿಸುವ ಮೂಲಕ, ನಾವು ಸಿದ್ದರಾಮಯ್ಯ ಅವರ ಗೆಲುವನ್ನು ಖಚಿತಪಡಿಸಿಕೊಂಡಿದ್ದೇವೆ. ಆರು ತಿಂಗಳ ನಂತರ, ಸಿದ್ದರಾಮಯ್ಯ ಸಾಲ ಮರುಪಾವತಿಸಿದ್ದಾರೆ” ಎಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
“ಸಿಎಂ ಇಬ್ರಾಹಿಂ ಹೇಳಿಕೆಯ ವಿಡಿಯೋ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಂತಹ ಮತ ಖರೀದಿ ಕೃತ್ಯವು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123(1)(ಬಿ) ಅಡಿಯಲ್ಲಿ ಭ್ರಷ್ಟಚಾರವಾಗಿದೆ ಮತ್ತು ಅಂತಹ ಹೇಳಿಕೆಗಳು ನಿಜವಾಗಿದ್ದರೆ ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸಿದ್ದರಾಮಯ್ಯ ಗೆಲುವಿಗೆ 3000 ಮತಗಳ ಖರೀದಿ! :ಇಬ್ರಾಹಿಂ
ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿದ್ದರು. ಆಗ ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ನೇರವಾಗಿ ಆರೋಪಿಸಿದ್ದರು.
ಕಳೆದ ಕೆಲ ದಿನಗಳ ಹಿಂದೆ ಮೈಸೂರಿನ ಕೆ.ಎಸ್.ಓ.ಯು ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇಬ್ರಾಹಿಂ, ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಆಗ ನಾನು ಮ್ಯಾನೇಜ್ ಮಾಡಿದ್ದೇನೆ, 800-1000 ಚಿಕ್ಕ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಹೇಳಿದ್ದೆ. ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು, ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು ಎಂದು ಬಾಂಬ್ ಹಾಕಿದ್ದರು.