ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂಡಿ ತಾಲೂಕಿನ ಚಿಕ್ಕ ಬೇವಿನೂರು ವಲಯದ ಅಹಿರಸಂಗ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ವತಿಯಿಂದ ಮಾಸಾಶನ ಫಲಾನುಭವಿಯಾದ ರೇವೂಬಾಯಿ ಮಠ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ನಟರಾಜ್ ಎಲ್.ಎಂ. ಅವರು ಉದ್ಘಾಟಿಸಿ ಎಲ್ಲರನ್ನು ಸ್ವಾಗತಿಸಿದರು.
ಬಳಿಕ ಕಲಬುರಗಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆ ಯೋಜನೆ ನಿರ್ಗತಿಕರಿಗೆ ಆಶ್ರಯ ಕಲ್ಪಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 800 ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದ್ದು, 18 ಸಾವಿರಕ್ಕೂ ಹೆಚ್ಚು ಜನರಿಗೆ ಮಾಸಾಶನ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿಜಯಪುರ ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವಿಕೆ, ಜ್ಞಾನದೀಪ ಶಿಕ್ಷಕರ ನೇಮಕ ಹಾಗೂ ಸುಜ್ಞಾನನಿಧಿ ಶಿಷ್ಯವೇತನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯೋಜನೆ ಕೈಗೊಳ್ಳುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರೇವೂಬಾಯಿ ಮಠ ಅವರಿಗೆ ವಾತ್ಸಲ್ಯ ಮನೆ ಕೀಲಿ ಕೈ ಗಳನ್ನು ಹಸ್ತಾಂತರಿಸಿ, ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ಹಾರೈಸಲಾಯಿತು.
ನಿವೃತ್ತ ಶಿಕ್ಷಕ ಸಿದ್ದರಾಮ ಬರಡೋಲ ಮಾತನಾಡಿ, ಸರ್ಕಾರ ಮಾಡದೇ ಇರುವ ಅನೇಕ ಜನೋಪಯೋಗಿ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇಂತಹ ಪುಣ್ಯದ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಶ್ರೀ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಜಾಹಿದ ಮನಿಯರ, ಹನುಮಂತ ಕಂಬಾರ, ಸಿದ್ದಯ್ಯ ಮಠ, ಶಿವಯ್ಯ ಮಠ, ಮೇಲ್ವಿಚಾರಕಿ ಅಶ್ವಿನಿ ಸಂಗೊಳ್ಳಿ, ಸೇವಾ ಪ್ರತಿನಿಧಿಗಳಾದ ಕಾವೇರಿ ಮಠ, ನಾಗೇಂದ್ರ ಬಿರಾದಾರ ಸೇರಿದಂತೆ ಸಂಘದ ಸದಸ್ಯರು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು. ಸಂಗೊಳ್ಳಿ, ಸೇವಾ ಪ್ರತಿನಿಧಿಗಳಾದ ಕಾವೇರಿ ಮಠ, ನಾಗೇಂದ್ರ ಬಿರಾದಾರ ಸೇರಿದಂತೆ ಸಂಘದ ಸದಸ್ಯರು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.

