ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರ ಬಹುದಿನಗಳ ಬೇಡಿಕೆಯ ಮೀಸಲಾತಿ ಹೆಚ್ಚಳ ಮಾಡಿ ಒಳಮೀಸಲಾತಿ ನೀಡಿದ್ದ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ (ಝಳಕಿ) ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರಕಟಣೆ ಮೂಲಕ ತಿಳಿಸಿದ ಅವರು, ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನೂ ಸರಿಯಾಗಿ ಪಾಲಿಸಿದಂತೆ ಕಾಣುತ್ತಿಲ್ಲ. ಅದೇರೀತಿ ನ್ಯಾ.ನಾಗಮೋಹನ್ ದಾಸ್ ವರದಿಯನ್ನೂ ಸರಿಯಾಗಿ ಪಾಲಿಸಿದಂತಿಲ್ಲ ಎಂದು ಆಕ್ಷೇಪಿಸಿದ್ದಾರೆ. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಎ, ಬಿ, ಸಿ, ಡಿ, ಇ ಎಂದು 5 ವರ್ಗಗಳನ್ನು ಮಾಡಿದ್ದರು. ಅದನ್ನು ಇವರು ಎ, ಬಿ, ಸಿ ಎಂದು ಮಾಡಿದ್ದಾರೆ.
ನರೇಂದ್ರ ಸ್ವಾಮಿ ಮೊದಲಾದವರ ಮೂಲಕ ನೀವೇ ವಿಂಗಡಣೆ ಮಾಡುವುದಾದರೆ, ಸರಕಾರ ಮತ್ತು ಸಿದ್ದರಾಮಯ್ಯನವರಿಗೆ ಜಸ್ಟಿಸ್ ಸದಾಶಿವ ಆಯೋಗ, ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ನೂರಾರು ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎಂದಿದ್ದಾರೆ.
ಜಸ್ಟಿಸ್ ಸದಾಶಿವ ಆಯೋಗವನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಘೋಷಣೆ ಮಾಡಿತ್ತೇ ವಿನಾ ಆ ಆಯೋಗಕ್ಕೆ ಹಣಕಾಸಿನ ನೆರವನ್ನು ಕೊಟ್ಟು ವ್ಯವಸ್ಥೆ ಮಾಡಿದ್ದು, ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ಬಿಜೆಪಿ ಸರಕಾರ. ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಸವರಾಜ ಬೊಮ್ಮಾಯಿಯವರು ಮುಂದಾಗಿದ್ದರು.
ದತ್ತಾಂಶ ಇಟ್ಟುಕೊಂಡು ವರ್ಗೀಕರಣ ಮಾಡಬೇಕಿತ್ತು. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ವಿಚಾರವನ್ನು ಇಟ್ಟುಕೊಂಡು ಒಳ ಮೀಸಲಾತಿ ಕೊಡಬೇಕೇ ಹೊರತು ಜನಸಂಖ್ಯೆ ಆಧಾರದಲ್ಲಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.
ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಪ್ರಾಮಾಣಿಕ ಉತ್ತರ ಕೊಡಬೇಕು. ಹಿಂದೆ ಬಿಜೆಪಿ ಸರಕಾರ ಶೇ 17 ಮೀಸಲಾತಿ ಕೊಟ್ಟಾಗ ಅಪಪ್ರಚಾರ ಮಾಡಿದ್ದೀರಿ. ಈಗ ಅದೇ ಶೇ 17 ಅನ್ನು ಮುಂದಿಟ್ಟಿದ್ದೀರಲ್ಲವೇ? ಬಿಜೆಪಿ ಸರಕಾರ ಮಾಡಿದ್ದನ್ನು ಈಗಲಾದರೂ ಒಪ್ಪಿಕೊಳ್ಳಿ ಎಂದು ಆಗ್ರಹಿಸಿದರು.