ಉಜನಿ ಹಾಗೂ ವೀರ್ ಜಲಾಶಯದಿಂದ ೧.೭೫ ಲಕ್ಷ ಕ್ಯೂಸೆಕ್ಸ್ ನೀರು
ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಜಲಾಶಯದಿಂದ ವೀರ್‌ಧರಣ ಜಲಾಶಯದಿಂದ ೧.೭೫ ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ಬುಧವಾರದಂದು ರಾತ್ರಿ ೦೮:೩೦ ಕ್ಕೆ ಪ್ರವಾಹ ನಿಯಂತ್ರಣಕ್ಕಾಗಿ ಉಜನಿ ಜಲಾಶಯದ ಸ್ವಿಲ್‌ವೇಯಿಂದ ೬೦ ಸಾವಿರ ಹಾಗೂ ಪವರ್ ಹೌಸ್‌ನಿಂದ ೧೬ ನೂರು ಕ್ಯೂಸೆಕ್ ನೀರನ್ನು ಬಿಡಲಾಗಿದೆ ಅಲ್ಲದೆ ವೀರ್ ಜಲಾಶಯದ ಪ್ರದೇಶದಲ್ಲಿ ಮಳೆ ಹೆಚ್ಚಾದ ಕಾರಣ ರಾತ್ರಿ ೦೬ ಗಂಟೆಗೆ ೪೨೭೨೪ ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಹೀಗೆ ಒಟ್ಟು ಮೊದಲಿದ್ದ ನೀರಿನ ಪ್ರಮಾಣ ಸೇರಿದಂತೆ ಒಟ್ಟು ೧.೭೫ ಲಕ್ಷ ಕ್ಯೂಸೆಕ್ ನೀರನ್ನು ಬೀಮಾ ನದಿಗೆ ಹರಿಬಿಡಲಾಗಿದೆ ಎಂದು ಪಂಢರಪುರದ ಭೀಮಾ ನೀರಾವರಿ ಇಲಾಖೆಯ ಉಪ ಕಾರ್ಯನಿರ್ವಾಹಕ ಅಭಿಯಂತ್ರರಾದ ಪಿ.ಎಂ.ಪಾಟೀಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಿಂದ ಚಡಚಣ ತಾಲೂಕಿನಲ್ಲಿ ಭೀಮಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಉಮರಜ, ಉಮರಾಣಿ, ಶಿರನಾಳ, ಹಿಂಗಣಿ, ಧೂಳಖೇಡ ಮುಂತಾದ ಗ್ರಾಮಗಳ ಬಳಿ ಇರುವ ೮ ಬ್ರಿಜ್ ಕಮ್ ಬಾಂದಾರಗಳು ಜಲಾವೃತಗೊಂಡಿವೆ. ಇದರಿಂದಾಗಿ ಕರ್ನಾಟಕ ಮಹಾರಾಷ್ಟç ಸಂಪರ್ಕ ಕಲ್ಪಿಸುವ ಉಮರಜ, ಉಮರಾಣಿ, ಹಿಂಗಣಿ, ಶಿರನಾಳ ಕೆಲವು ಹಳ್ಳಿಗಳ ಸಂಪರ್ಕ ಕಳೆದುಕೊಂಡಿವೆ.
ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ ಸೂಚಿಸಲಾಗಿದೆ. ಭೀಮಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಿ, ಸುರಕ್ಷಿತ ತಾಣಗಳಿಗೆ ಜನರು ತಮ್ಮ ಸಾಮಾನು ಹಾಗೂ ಜಾನುವಾರಗಳೊಂದಿಗೆ ತೆರಳಲು ಸೂಚಿಸಲಾಗಿದೆ ಎಂದು ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದ್ದಾರೆ.
ಈ ಬಾಂದಾರುಗಳ ಮೂಲಕ ಕರ್ನಾಟಕದಿಂದ ಮಹಾರಾಷ್ಟ್ರ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕದ ಗ್ರಾಮಗಳಿಗೆ ದಿನ ನಿತ್ಯದ ಕೃಷಿ ಮತ್ತು ವ್ಯವಹಾರಗಳಿಗಾಗಿ ಸಂಚಾರಕ್ಕೆ ತೊಂದರೆ ಉಂಟಾಗಿದೆ. ನಿಗದಿತ ಗ್ರಾಮಗಳಿಗೆ ತೆರಳಲು ರೈತರು ಮತ್ತು ಸಾರ್ವಜನಿಕರು ಹಲವಾರು ಕಿ.ಮೀ ಸುತ್ತು ಹಾಕಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಭೀಮಾ ನದಿಯಲ್ಲಿ ಮಹಾಪುರ ಉಂಟಾಗುವ ಮಾಹಿತಿ ತಿಳಿದ ಇನ್ನುಳಿದ ಗ್ರಾಮಗಳ ರೈತರು ನದಿ ಪಾತ್ರದಲ್ಲಿ ಅಳವಡಿಸಲಾಗಿದ್ದ ಪಂಪ್‌ಸೆಟ್‌ಗಳನ್ನು ಹೊರ ತೆಗೆದು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ. ನೀರು ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆಗಳು ನೀರು ಪಾಲಾಗುವ ಆತಂಕ ಎದುರಾಗಿದೆ.