ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಬರುವ ಗಣೇಶ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಣೆ ಮಾಡಿ ಮತ್ತು ಹಬ್ಬವನ್ನು ಭಕ್ತಿಗೋಸ್ಕರ ಮಾಡಿ ಭಕ್ತಿ ಹೆಸರಲ್ಲಿ ಬೇರೆ ಬೇರೆ ಕಾರ್ಯಗಳನ್ನು ಮಾಡುವುದಾಗಲಿ ಮತ್ತು ದಾಂಧಲೆ ಮಾಡುವುದಾಗಲಿ ಮಾಡಿದರೆ ಅಂತವರ ವಿರುದ್ಧ ರೌಡಿ ಶೀಟರ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿವೈಎಸ್‌ಪಿ ಸಯ್ಯದ ರೋಶನ್ ಜಮೀರ ಎಚ್ಚರಿಸಿದರು.
ನಗರದ ಎಸ್‌ಆರ್‌ಎ ಕ್ಲಬ್‌ನಲ್ಲಿ ಬುಧವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಮಖಂಡಿ ಉಪವಿಭಾಗದ ಪೋಲಿಸರು ಏರ್ಪಡಿಸಿದ್ದ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೌರಿಗಣೇಶ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಬೇಕು, ಕಿಡಿಗೇಡಿಗಳಿಗೆ ಅವಕಾಶ ನೀಡಬಾರದು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಕಡಪಟ್ಟಿ ಬಸವಣ್ಣನ ಜಾತ್ರೆ, ಈದ್ ಮಿಲಾದ್ ಹಾಗೂ ಗಣೇಶ ಹಬ್ಬಗಳು ಒಂದೇ ಸಮಯದಲ್ಲಿ ಬಂದಿವೆ ಆದ್ದರಿಂದ ಎಲ್ಲರೂ ಸಹಕಾರ, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು. ಗಣೇಶ ಪೆಂಡಾಲಗಳ ಕಾವಲು, ಪೊಲೀಸ್ ಮಿತ್ರರ ಪಡೆ ರಚನೆ, ಎಲ್ಲ ಪದಾಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸಿ, ಪರವಾನಿಗೆ ಪಡೆದು ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಹಳೆಯ ವಿದ್ಯುತ್ ದೀಪಗಳನ್ನು ಅಳವಡಿಸಬಾರದು. ಯಾವುದೇ ಅವಘಡಗಳು ಸಂಭಿಸಿದರೆ ಪೆಂಡಾಲ್‌ನ ಮುಖ್ಯಸ್ಥರೆ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.
ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಪೆಂಡಾಲ್‌ಗಳನ್ನು ನಿರ್ಮಿಸುವಂತೆ ತಿಳಿಸಿದರು. ಡಿಜೆ ಬಳಸಲು ಸರ್ಕಾರ ಅನುಮತಿ ನೀಡಿಲ್ಲ. ಆದ್ದರಿಂದ ಸಾಂಸ್ಕೃತಿಕ ವಾದ್ಯಮೇಳಗಳನ್ನು ಬಳಸುವಂತೆ ಹೇಳಿದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ ಎಲ್ಲ ಇಲಾಖೆಗಳಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ, ಸಾರ್ವಜನಿಕರು ಸಹಕಾರ ನೀಡಬೇಕು. ಪಿಓಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಜಮಖಂಡಿ ಮಾದರಿಯಾಗಿ ರಾಜ್ಯದಲ್ಲೇ ಬರೀ ಮಣ್ಣಿನ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಮಾದರಿಯಾಗಬೇಕು ಎಂದು ಹೇಳಿದರು.ಕಸಕಡ್ಡಿಗಳನ್ನು ದೇವರ ಮೇಲಿನ ನಿರ್ಮಾಲ್ಯವನ್ನು ಎಲ್ಲಂದರಲ್ಲಿ ಎಸೆಯಬಾರದು ನಾಗರೀಕ ಕರ್ತವ್ಯಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಪೌರಾಯುಕ್ತ ಜ್ಯೋತಿ ಗಿರೀಶ ಮಾತನಾಡಿ ನಗರಸಭೆಯಿಂದ ಎಲ್ಲಾ ರೀತಿಯ ಸಹಕಾರವನ್ನು ಕಳೆದ ವರ್ಷದಂತೆ ನೀಡಲಾಗುತ್ತದೆ ಎಂದು ಹೇಳಿದರು.
ನಗರಸಭೆಯಿಂದ ಯಾವುದೇ ಶುಲ್ಕಗಳನ್ನು ಸಂಗ್ರಹಿಸದೇ ಉಚಿತ ಸೇವೆ ನೀಡುವದಾಗಿ ಹೇಳಿದರು. ತಹಸೀಲ್ದಾರ ಅನೀಲ ಬಡಿಗೇರ ಮಾತನಾಡಿ ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸುವಂತೆ ಕರೆ ನೀಡಿದರು.
ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ಗಣೇಶ ಮಹಾಮಂಡಳದವರು ಆದಷ್ಟು ಬೇಗನೆ ಪರವಾನಿಗೆ ಗಳನ್ನು ಪಡೆದುಕೊಳ್ಳಬೇಕು. ತಡರಾತ್ರಿ ವರೆಗೆ ಮೆರವಣಿಗೆ ಮಾಡದೇ ಮಹಿಳೆಯರು ಮಕ್ಕಳು ಕಾರ್ಯಕ್ರಮ ವಿಕ್ಷಿಸಲು ಅನುಕೂಲವಾಗುವಂತೆ ಬೇಗನೆ ಮೆರವಣಿಗೆ ಪ್ರಾರಂಭಿಸಬೇಕು ಎಂದು ಹೇಳಿದರು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಲೇಜರ್ ಲೈಟ್, ಡಿಜೆಗಳನ್ನು ಬಳಸಬಾರದು ಎಂದು ಹೇಳಿದರು.
ಕೆಇಬಿಯ ಎಇಇ ವಿಶಾಲ ಧರೆಪ್ಪಗೋಳ ಮಾತನಾಡಿ ಅತಿ ಕಡಿಮೆ ಶುಲ್ಕವನ್ನು ತಾತ್ಕಾಲಿಕ ವಿದ್ಯುತ್ ಸರಬರಾಜಿಗೆ ಸಂಗ್ರಹಿ ಸಲಾಗುತ್ತದೆ. ಅದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಸಾಂಸ್ಕೃತಿಕ ವಾದ್ಯಗಳನ್ನು ಬಳಕೆ ಮಾಡಿದಲ್ಲಿ ಮಹಿಳೆಯರು ಕೂಡ ಹಬ್ಬದಲ್ಲಿ ಭಾಗಿಯಾಗುತ್ತಾರೆ ಹಾಗೂ ವೀಕ್ಷಣೆ ಮಾಡುತ್ತಾರೆ. ರಸ್ತೆ ಮಾರ್ಗದಲ್ಲಿ ವಿದ್ಯತ್ ದೀಪಗಳ ಅಳವಡಿಕೆ, ಜೋತು ಬಿದ್ದಿರುವ ವೈರ್‌ಗಳನ್ನು ಸರಿಪಡಿಸಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಗಣೇಶ ಉತ್ಸವ ಸಮೀತಿಯ ಪರವಾಗಿ ರಾಕೆಶ್ ಲಾಡ್, ಪ್ರದೀಪ ಮೆಟಗುಡ್, ಗಣೇಶ ಶಿರಗಣ್ಣವರ, ವಿಜಯ ಕಟಗಿ, ನಗರಸಭೆ ಸದಸ್ಯ ಕುಶಾಲ ವಾಘಮೋರೆˌ ಪ್ರಕಾಶ ಅರಕೇರಿ, ಮಂಜು ಬೋವಿ, ಮುಂತಾದವರು ಮಾತನಾಡಿದರು.
ಗಣೇಶ ಮಹಾಮಂಡಳದ ಅಧ್ಯಕ್ಷ ಸಚಿನ ಪಟ್ಟಣಶೆಟ್ಟಿ, ಪಿಡಬ್ಲೂಡಿಯ ಅಧಿಕಾರಿ ಸುಹಾನಾ ಬಾನುˌ ಅಬಕಾರಿ ಇಲಾಖೆಯ ಅಧಿಕಾರಿ ಯಶವಂತ ಮುಧೋಳ, ಅಗ್ನಿಶಾಮಕದ ಅಧಿಕಾರಿ ನಿಂಗಪ್ಪ ಹೂಗಾರ, ವೇದಿಕೆಯಲ್ಲಿದ್ದರು. ನಗರಠಾಣೆ ಪಿಎಸ್‌ಐ ಅನೀಲ ಕುಂಬಾರ ಸ್ವಾಗತಿಸಿ ವಂದಿಸಿದರು.