ಸಿಂದಗಿ: ಮಕ್ಕಳು ಮೋಬೈಲಿಂದ ದೂರವಿದ್ದು, ಅಧ್ಯಯನದೆಡೆಗೆ ಹೆಚ್ಚಿನ ಗಮನ ಹರಿಸಬೇಕು. ತಮ್ಮ ದಿನ ನಿತ್ಯದ ಅಭ್ಯಾಸದ ವೇಳಾಪಟ್ಟಿಯನ್ನು ತಯಾರಿಸಿ ನಿರ್ದಿಷ್ಟ ಸಮಯ ಹಾಗೂ ಸ್ಥಳ ನಿಗದಿಪಡಿಸಿ ಓದಬೇಕು ಎಂದು ಹೊನ್ನೂಟಗಿ ಪಪೂ ಕಾಲೇಜಿನ ಉಪನ್ಯಾಸಕ ಬಸವರಾಜ ಕುಂಬಾರ ಹೇಳಿದರು.
ಸೋಮವಾರ ಪಟ್ಟಣದ ಪ್ರೇರಣಾ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯ ಪ್ರಯುಕ್ತ ಜ್ಞಾನ ಬಿಂದು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಕಂಡ ಅಪ್ರತಿಮ ಸಾಧಕ, ಸಂತ ತತ್ವಜ್ಞಾನಿ ಮಹಾತ್ಮಾ ಗಾಂಧೀಜಿ ಸತ್ಯ, ಅಹಿಂಸೆ, ತ್ಯಾಗದ ಮೂಲಕ ಸ್ವಾತಂತ್ರ‍್ಯವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತ ಮಾಡಿದರು. ಪ್ರಸ್ತುತ ಭಾರತ ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಮುಂದುವರೆದರೂ ಆತ್ಮವಿಶ್ವಾಸದ, ಧೈರ್ಯದ ಕೊರತೆ, ಉತ್ತಮ ಸಂಸ್ಕಾರದ ಕೊರತೆ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದೆ. ಇದಕ್ಕೆ ವಿದ್ಯಾರ್ಥಿಗಳ ಆತ್ಮಹತ್ಯೆಯೇ ನೈಜ ಉದಾಹರಣೆ ಎಂದರು.
ಇದೇ ವೇಳೆ ಸಿಂದಗಿ ಕ್ಷೇತ್ರಶಿಕ್ಷಣಾಧಿಕಾರಿ ಇಸಿಓ ಎ.ಎಮ್ ಮಾಡಗಿ ಮತ್ತು ಸಂಸ್ಥೆಯ ಅಧ್ಯಕ್ಷ ಆರ್.ಡಿ ಕುಲಕರ್ಣಿ ಮಾತನಾಡಿ, ಲಾಲ್ ಬಹಾದ್ದೂರ್ ಶಾಸ್ತ್ರಿಜಿ ಸಹ ತ್ಯಾಗ ಹಾಗೂ ಸಂಸ್ಕಾರದ ಘನತೆಯನ್ನು ಎತ್ತಿ ಹಿಡಿದವರು. ಅಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮುಖಾಂತರ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಶ್ಲಾಘನೀಯ. ಮಕ್ಕಳಲ್ಲಿ ಗೌರವಿಸುವ ಗುಣ, ಸಂಸ್ಕಾರ ಬರಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಗುರುಮಾತೆ ಎಸ್.ಐ ಅಸ್ಕಿ, ಸಂಸ್ಥೆಯ ನಿರ್ದೇಶಕ ಪಿ.ಡಿ ಕುಲಕರ್ಣಿ, ವಿದ್ಯಾಶ್ರೀ ಅಂಬಲಗಿ, ಸತೀಶ್ ಕುಲಕರ್ಣಿ, ದ್ರಾಕ್ಷಾಯಿಣಿ ಹುಗ್ಗಿ ಸೇರಿದಂತೆ ಸಂಸ್ಥೆಯ ನಿರ್ದೇಶಕ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Related Posts
Add A Comment