ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗಣೇಶನ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗಿನ ಉತ್ಸವವನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಮಂಡಳಿ ಹಾಗೂ ಯುವಕ ಸಂಘಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿಪಿಆಯ್ ಆರ್.ಸಿ.ಆವುಜಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಅಂಗವಾಗಿ ಮಂಗಳವಾರ ಜರುಗಿದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಎಲ್ಲರೂ ಪೊಲೀಸ್ ಇಲಾಖೆಯ ನಿಯಮಾವಳಿ ಪಾಲನೆ ಮಾಡಬೇಕು. ಡಿಜೆಯಂತ ಅಬ್ಬರದ ಸಂಗೀತಕ್ಕೆ ಅವಕಾಶವಿಲ್ಲ. ಯಾವುದೇ ಅನಗತ್ಯ ವಿಷಯಗಳತ್ತ ಗಮನ ನೀಡದೇ, ಶಿಸ್ತು, ಸಹನೆಯಿಂದ ಹಬ್ಬದ ಆಚರಣೆಗೆ ಮುಂದಾಗಬೇಕು ಎಂದರು.
ಪಿಎಸ್‌ಐ ಸಚೀನ್ ಆಲಮೇಲಕರ ಪ್ರಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಕದಡುವ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲ. ಪಟ್ಟಣದ ಎಲ್ಲ ಗಣೇಶ ಮಹಾಮಂಡಳಿಗಳಿಗೆ ಹೆಸ್ಕಾಂ, ಪಟ್ಟಣ ಪಂಚಾಯಿತಿ ಸೇರಿದಂತೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದ್ದು, ಗಣೇಶ ಯುವಕ ಮಂಡಳಿಗಳು ಇಲಾಖೆಯ ನಿಯಮಾವಳಿಗಳನ್ನು ಪಾಲಿಸಬೇಕು ಎಂದರು.
ಮಹಾಮಂಡಳ ಹಾಗೂ ಸಾರ್ವಜನಿಕರ ಪರವಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಿ.ಕೆ.ಕುದರಿ, ಶ್ರೀಧರ ನಾಡಗೌಡ, ಮಹಿಬೂಬ್ ಹುಂಡೇಕಾರ, ಶಂಕರಗೌಡ ಪಾಟೀಲ, ಕಾಶೀನಾಥ ತಳಕೇರಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯರಾದ ರಾಜು ಮೆಟಗಾರ, ಸುನೀಲ ಕನಮಡಿ, ಹುಸೇನ್ ಕೊಕಟನೂರ, ಸಿಬ್ಬಂದಿ ಎಸ್.ಎಸ್.ಸಿನ್ನೂರ, ಬಸನಗೌಡ ಪಾಟೀಲ, ಶಂಕರ ಜಮಾದಾರ, ವಿನೋದ ಚವ್ಹಾಣ, ಅಶೋಕ ಕಬಾಡಗಿ, ಗುರು ಸೌದಿ, ಎಸ್.ಆರ್.ಪಾಟೀಲ, ಅಕ್ಷಯ ಹಿರೇಮಠ, ಸಾಗರ ಪಾಟೀಲ ಇದ್ದರು.