ಅಕ್ಕಮಹಾದೇವಿ ಮಹಿಳಾ ವಿವಿ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಊಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಕಾನೂನಿನ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ ಮಹಾನ್ ನಾಯಕ ದಿವಂಗತ ಡಿ.ದೇವರಾಜ ಅರಸರು,” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಹೇಳಿದರು.
ವಿಶ್ವವಿದ್ಯಾಲಯದ ಸಮಾನ ಅವಕಾಶ ಘಟಕದ ವತಿಯಿಂದ ಬುಧವಾರ ಸಿಂಡಿಕೇಟ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಡಿ. ದೇವರಾಜ ಅರಸರ ೧೧೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ವಿಭಾಗದ ಪ್ರೊ.ನಾರಾಯಣ ಪವಾರ ಅವರು, “ಪ್ರಗತಿಪರ ಸಾಧನೆಗಳ ಸರದಾರ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸರ ಕೊಡುಗೆಗಳು ಅಪಾರವಾಗಿವೆ ಎಂದು ಹೇಳಿದರು.
ಪ್ರೊ.ಎಂ.ನಾಗರಾಜರು ಮಾತನಾಡಿ, “ಸಮಾಜವಾದದ ಬೆನ್ನೆಲುಬಾಗಿ, ಅದನ್ನು ಕರ್ನಾಟಕದಲ್ಲಿ ಬಿತ್ತಿ ಬೆಳೆಸಿದ ಮಹಾನ್ ನಾಯಕ ದೇವರಾಜ ಅರಸರು. ಅವರ ಮೌಲ್ಯಾಧಾರಿತ ರಾಜಕಾರಣ ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಹೊಸ ದಿಕ್ಕು ತೋರಿಸಿತು,” ಎಂದು ಅಭಿಪ್ರಾಯಪಟ್ಟರು.
ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಜಿ.ತಡಸದ ಅವರು, ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡುವ ಮೂಲಕ ಕರ್ನಾಟಕದ ಏಕೀಕರಣಕ್ಕೆ ಹೊಸ ಬಾಷ್ಯ ಬರೆದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಓಂಕಾರ ಕಾಕಡೆ, ಮಾತನಾಡಿ, ರಾಜ್ಯದ ರಾಜಕೀಯದಲ್ಲಿ ೭೦ರ ದಶಕದಲ್ಲಿ ತಳ ವರ್ಗದ ನಾಯಕತ್ವವನ್ನು ಬೆಳೆಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕನ್ನು ಕೊಟ್ಟವರು ಡಿ.ದೇವರಾಜ ಅರಸರು ಎಂದು ಬಣ್ಣಿಸಿದರು.
ಹಿಂದುಳಿದ ವರ್ಗಗಳ ಘಟಕದ ಸಂಯೋಜಕ ಪ್ರೊ. ಶ್ರೀನಿವಾಸ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ವಿದ್ಯಾರ್ಥಿನಿಯರು, ಹಾಗೂ ಭೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.