ದಿ ಡಿ.ದೇವರಾಜ್ ಅರಸು ಅವರ ೧೧೦ನೇ ಜನ್ಮ ದಿನಾಚರಣೆಯಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ವಿಜಯಪುರ: ಹಿಂದುಳಿದ ವರ್ಗಗಳ, ಶೋಷಿತರ ಅಭಿವೃದ್ಧಿಗೆ ಶ್ರಮಿಸಿದ ಡಿ. ದೇವರಾಜ ಅರಸು ಅವರು ಉಳುವವನೇ ಭೂ ಒಡೆಯ ಎನ್ನುವ ಭೂ ಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಸಾಮಾಜಿಕ ಪರಿವರ್ತನೆ ಹಾಗೂ ಸಾಮಾಜಿಕ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೧೦ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಅವರು ಮಾತನಾಡಿದರು.
ಡಿ.ದೇವರಾಜ್ ಅರಸು ಅವರು ಅನೇಕ ಜನಪರವಾದ ಯೋಜನೆ ರೂಪಿಸಿ, ಜಾರಿಗೆ ತಂದು, ಬಡವರ, ಅಶಕ್ತರ ಶೋಷಿತರ ಬಾಳಿಗೆ ಬೆಳಕನ್ನು ತಂದುಕೊಟ್ಟು ಅವರ ಬಾಳು ಬೆಳಗಿದ ಬಡವರ ಆಶಾಕಿರಣವಾಗಿದ್ದರು. ದುರ್ಬಲರ ಏಳಿಗೆಗಾಗಿ ನೂರಾರು ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಹಾಗೂ ಅನೇಕ ಯೋಜನೆ ಜಾರಿಗೆ ತರುವ ಮೂಲಕ ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಡಿ. ದೇವರಾಜ ಅರಸು ಅವರ ಜನಪರ ಕಾಳಜಿಯ ಸಿದ್ಧಾಂತ ಬಹಳಷ್ಟು ಜನರ ಪಾಲಿಗೆ ಬೆಳಕಾಗಿದೆ ಎಂದು ಹೇಳಿದರು.
ಎಕ್ಸಲಂಟ್ ಕಾಲೇಜ್ ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ ಮಾತನಾಡಿ, ಭಾಗ್ಯಜ್ಯೋತಿಯಂತಹ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರೋರ್ವ ಧೀಮಂತ ನಾಯಕರು. ಹಿಂದುಳಿದ ವರ್ಗಗಳ ಆಶಾದೀಪ, ಆರ್ಥಿಕ ಶೈಕ್ಷಣಿಕ ಸಮಗ್ರ ಚಿಂತನೆಗಳ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದರು. ಈ ಮಹನೀಯರ ಚಿಂತನೆಗಳನ್ನು ಇಂದಿನ ಯುವಕರು ಅರಿತುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೇಯರ್ ಎಂ.ಎಸ್.ಕರಡಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಇಲಿಯಾಸ್ ಬೋರಾಮಣಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಪಾಲಿಕೆ ಉಪ ಆಯುಕ್ತ ವೈ.ಎಚ್. ನಾರಾಯಣಕರ್ ಸೇರಿದಂತೆ ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್, ಸಿದ್ದು ರಾಯಣ್ಣವರ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ರಂಗನಾಥ ಬತಾಶೆ ಹಾಗೂ ತಂಡದಿಂದ ನೃತ್ಯಕಲಾ ಪ್ರದರ್ಶನ ಮಾಡಲಾಯಿತು.
ಮೆರವಣಿಗೆಗೆ ಚಾಲನೆ
ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಿ. ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಚಾಲನೆ ನೀಡಿದರು.
ಕಲಾಮೇಳ ಹಾಗೂ ಕಲಾ ತಂಡಗಳೊಂದಿಗೆ ಮೆರವಣಿಗೆ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಜರುಗಿತು.

“ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಭತ್ಯೆ ಸೈಫಂಡರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಪರಿವರ್ತನೆಯ ಹರಿಕಾರರಾದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಅವರು ನಾಡು ನುಡಿಗಾಗಿ ಶ್ರಮಿಸಿದ್ದಾರೆ.”
– ಡಾ. ಆನಂದ.ಕೆ
ಜಿಲ್ಲಾಧಿಕಾರಿ, ವಿಜಯಪುರ

“ಡಿ. ದೇವರಾಜ್ ಅರಸು ಅವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು, ಸಾಮಾಜಿಕವಾಗಿ ಬಹಳಷ್ಟು ಸುಧಾರಣೆಗಳನ್ನು ತರುವಲ್ಲಿ ಇವರು ಶ್ರಮಿಸಿದ್ದಾರೆ. ಈ ಅವಧಿಯಲ್ಲಿ ವಸತಿ ನಿಲಯಗಳ ಸ್ಥಾಪನೆಯ ಆರಂಭಗೊಂಡು, ಎಲ್ಲರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಜಿಲ್ಲೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಸೌಲಭ್ಯ ಒದಗಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನ ಹೊಂದಬೇಕು.”
– ರಿಷಿ ಆನಂದ
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ವಿಜಯಪುರ