ಉದಯರಶ್ಮಿ ದಿನಪತ್ರಿಕೆ
ಚಡಚಣ: ಇತ್ತೀಚೆಗೆ ವರ್ಗಾವಣೆಗೊಂಡ ಚಡಚಣ ಕ್ಷೇತ್ರಶಿಕ್ಷಣಾಧಿಕಾರಿ ಸುಜಾತಾ ಹುನೂರ ಅವರ ತೆರವಾಗಿರುವ ಸ್ಥಾನಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಚಿದಾನಂದ ಕಟ್ಟಿಮನಿ ಅವರು ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮನೆಯ ಮಗನಾಗಿ ನಾನು ನನ್ನ ತಾಲೂಕಿನ ಎಲ್ಲ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲ ಶಿಕ್ಷಕರು ಭಯ ಮುಕ್ತ ವಾತಾವರಣದಲ್ಲಿ ತಮ್ಮ ಶೈಕ್ಷಣಿಕ ಸೇವೆ ಸಲ್ಲಿಸಲು ನಾನು ಶಿಕ್ಷಕ ಸಂಘಟನೆ ಹಾಗೂ ಶಿಕ್ಷಕರ ಬೆನ್ನೆಲುಬು ಆಗಿ ಕರ್ತವ್ಯ ನಿರ್ವಹಿಸುವೆ. ಶೀಘ್ರದಲ್ಲಿ ತಾಲೂಕಿನ ಗುರುಸ್ಪಂದನ ಕಾರ್ಯಕ್ರಮ ಏರ್ಪಡಿಸುವೆನ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್ ಎಸ್ ಪಾಟೀಲ ಮಾತನಾಡಿ ನಮ್ಮ ತಾಲೂಕಿನವರೆ ಆದ ಕಟ್ಟಿಮನಿ ಅವರು ಅತ್ಯಂತ ಪ್ರಾಮಾಣಿಕ ಅಧಿಕಾರಿಗಳು ಹಾಗೂ ಸ್ನೇಹ ಜೀವಿಗಳು. ಶಿಕ್ಷಕರಿಗೆ ಭಯ ಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಶೈಕ್ಷಣಿಕ ಪ್ರಗತಿಗೆ ತಮ್ಮ ಜೊತೆಗೆ ನಮ್ಮೆಲ್ಲ ನೌಕರರ ಸಂಘ ಸದಾ ಬೆನ್ನೆಲುಬಾಗಿ ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವಂತ ಉಮರಾಣಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಅತ್ಯಂತ ದೊಡ್ಡ ಸಂಘಟನೆ ಆಗಿದ್ದು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಅತ್ಯಂತ ದೊಡ್ಡ ಕೊಡುಗೆ ನೀಡುತ್ತಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅತ್ಯಂತ ಶೀಘ್ರದಲ್ಲಿಯೇ ಬಗೆಹರಿಸಿ ಶೈಕ್ಷಣಿಕ ಪ್ರಗತಿಗೆ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಮ್ಮ ಜೊತೆಗೆ ಸದಾ ಕೈ ಜೋಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಧಿಕಾರಿ ನಾಡಗೇರಿ, ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಎಸ್ ಬಿ ಪಾಟೀಲ, ಗುರು ಜೇವೂರ್, ಐ ಆರ್ ಬಾಲಗಾಂವ, ಸಿದ್ದು ಬಾಲಗಾಂವ, ಎಸ್ ಎಮ್ ಮಾವಿನಮರ, ಸಲೀಮ ಮಕಾನದಾರ, ಅನುದಾನಿತ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅಲ್ಲಮಪ್ರಭು ಕರಜಗಿ, ತಾಲೂಕಿನ ಸರಕಾರಿ ನೌಕರರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ, ಪ್ರೌಢಶಾಲಾ ನೌಕರರ ಸಂಘದ, ಅನುದಾನಿತ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ತಾಲೂಕಿನ ವಿವಿಧ ನೌಕರರ ಪದಾಧಿಕಾರಿಗಳು. ಚಡಚಣ ಪಟ್ಟಣದ ನಿವೃತ ವೀರ ಯೋಧರ ಸಂಘದ ಅಧ್ಯಕ್ಷ ಕಾಂತುಗೌಡ ಪಾಟೀಲ, ಸಿದ್ದು ಭಮಶೇಟ್ಟಿ, ಸಂಗಪ್ಪ ಪಾವಲೆ, ಕಲ್ಲು ಪತ್ತಾರ, ಹಾಗೂ ತಾಲೂಕಿನ ಶಿಕ್ಷಕರು ಭಾಗವಹಿಸಿದ್ದರು.