ವಿಜಯಪುರದ ಎರಡು ಕುಟುಂಬಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವೈಯಕ್ತಿಕ ಆರ್ಥಿಕ ನೆರವು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಳೆಯಿಂದ ನಷ್ಟ ಅನುಭವಿಸಿದ ನಗರದ ಎರಡು ಕುಟುಂಬಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಸಚಿವರು ಆಗಷ್ಟ 15ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂದು ರಾಮನಗರ ಬಳಿಯ ನೆಹರು ನಗರ ನಿವಾಸಿ ಅಚ್ಯುತ್ ಆಚಾರ ಪುರೋಹಿತ ಮತ್ತು ರಾಜಾಜಿನಗರದ ನಿವಾಸಿ ಜಾಫರ್ ಅಹ್ಮದ್ ಇನಾಮದಾರ ಅವರ ಕುಟುಂಬಕ್ಕೆ ತಲಾ ರೂ.50 ಸಾವಿರ ವೈಯಕ್ತಿಕ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಸಚಿವರು ಇದೀಗ ಎರಡೂ ಕುಟುಂಬಗಳಿಗೆ ತಲಾ ರೂ. 50 ಸಾವಿರ ಆರ್ಥಿಕ ನೆರವು ನೀಡಿದ್ದಾರೆ. ಸಚಿವರು ನೀಡಿದ ಹಣವನ್ನು ಕೆಪಿಸಿಸಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮತ್ತು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಅವರು ಬುಧವಾರ ಎರಡೂ ಕುಟುಂಬಗಳಿಗೆ ತಲುಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೆಹರು ನಗರ ನಿವಾಸಿ ಅಚ್ಯುತ ಆಚಾರ ಪುರೋಹಿತ, ಮೊನ್ನೆ ಸಚಿವರು ನಮ್ಮ ಬಡಾವಣೆಗೆ ಭೇಟಿ ನೀಡಿದಾಗ ಮಳೆ ನೀರಿನಿಂದಾದ ತೊಂದರೆಯನ್ನು ಗಮನಿಸಿದ್ದರು. ಅಲ್ಲದೇ, ಅಂದು ನೀಡಿದ ಭರವಸೆಯಂತೆ ಇಂದು ಆರ್ಥಿಕ ನೆರವು ತಲುಪಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ರಾಜಾಜಿನಗರ ನಿವಾಸಿ ಜಾಫರ್ ಅಹ್ಮದ್ ಇನಾಮದಾರ ಮಾತನಾಡಿ, ಮಳೆಯಿಂದಾಗಿ ನಮ್ಮ ಮನೆಗೆ ನೀರು ನುಗ್ಗಿ ಹಾನಿಯಾಗಿತ್ತು. ನಾನು ಅನಾರೋಗ್ಯ ಪೀಡಿತನಾಗಿದ್ದು, ಸಚಿವರು ಇಲ್ಲಿಗೆ ಭೇಟಿ ನೀಡಿದಾಗ ವಸ್ತುಸ್ಥಿತಿಯನ್ನು ಕಂಡು ವೈಯಕ್ತಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಇಂದು ಹಣ ತಲುಪಿಸುವ ಮೂಲಕ ನಮಗೆ ಸಹಾಯ ಮಾಡಿದ್ದಾರೆ. ಅವರ ಉಪಕಾರವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ನಗರದಲ್ಲಿ ಮಳೆಯಿಂದ ಆಗುತ್ತಿರುವ ಸಮಸ್ಯೆಗಳ ನಿಗಾ ವಹಿಸಿದ್ದಾರೆ. ಅಲ್ಲದೇ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗ ಮಳೆಸಂತ್ರಸ್ತ ಎರಡು ಕುಟುಂಬಗಳಿಗೆ ವೈಯಕ್ತಿಕ ಪರಿಹಾರ ನೀಡುವ ಮೂಲಕ ನುಡಿದಂತೆ ನಡೆಯುತ್ತಿದ್ದಾರೆ. ಈ ಹಿಂದೆಯೂ ಕೂಡ ಸಚಿವರು ಅನೇಕ ಸಲ ಸಂತ್ರಸ್ತರಿಗೆ ನೆರವು ಒದಗಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶ್ಪಾಕ್ ಮನಗೂಳಿ, ಹೊನಮಲ್ಲ ಸಾರವಾಡ, ಬಾಬು ಏಳಗಂಟಿ, ವಸಂತ ಹೊನಮೋಡೆ, ಚನ್ನು ಕಟ್ಟಿಮನಿ, ಮಂಜುಳಾ ಗಾಯಕವಾಡ, ಸವಿತಾ ಧನರಾಜ ಉಪಸ್ಥಿತರಿದ್ದರು.