ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲ್ಲೂಕಿನ ಕಲ್ಹಳ್ಳಿ ಗ್ರಾಮದ ಸತ್ಯಕಾಮ ಪ್ರತಿಷ್ಠಾನದ ಸುಮ್ಮನೆ ಮನೆ(ಸಭಾಭವಣದಲ್ಲಿ) ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗುವದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಇಲ್ಲಿನ ರಮಾ ನಿವಾಸದಲ್ಲಿ ಮಂಗಳವಾರ ಸುದ್ದಿಗೊಷ್ಠೀಯಲ್ಲಿ ಮಾತನಾಡಿ, ವಾರ್ಷಿಕ ಸಾಮಾನ್ಯ ಸಭೆಯನ್ನು ಕಲ್ಹಳ್ಳಿಯಲ್ಲಿ ನಡೆಸಲು ಉದ್ದೇಶಿಸಿದ್ದು, ಸ್ಥಳವನ್ನು ನೋಡಿ ಹಾಗೂ ಕಾರ್ಯಕಾರಣಿ ಸಮಿತಿಯನ್ನು ಏರ್ಪಡಿಸಿ ಅನುಮೋದನೆಯನ್ನು ಪಡೆದು ಅಂತಿಮವಾಗಿ ಘೋಷಣೆ ಮಾಡಲಾಗುವದು ಎಂದರು.
ನಮಗೆ ಎಲ್ಲಿ ಬೇಕಾದರು ಸಾಮಾನ್ಯ ಸಭೆಯನ್ನು ಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟವಾದ ಆದೇಶವನ್ನು ನೀಡಿದೆ, ಆದ್ದರಿಂದ ಹಳ್ಳಿ ಹಳ್ಳಿಗಳಿಗೆ ಸಾಮಾನ್ಯ ಸಭೆಯನ್ನು ಮಾಡುವದರಿಂದ ಜನರಲ್ಲಿ ಕನ್ನಡದ ಆಸಕ್ತಿ ಬರುತ್ತದೆ, ನಾವು ಇಗಾಗಲೇ ಹೋಬಳಿ ಮಟ್ಟದಲ್ಲಿ ಘಟಕವನ್ನು ಸ್ಥಾಪಿಸುತ್ತಿದ್ದೆವೆ, ಗ್ರಾಮಮಟ್ಟದಲ್ಲಿ ಘಟಕ ಮಾಡಿ ಜನಸಾಮಾನ್ಯರ ಪರಿಷತ್ತು ಮಾಡಲಾಗುವದು.
ಸಂಡೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆ ನಡೆಯಬೇಕಿತ್ತು ಆದರೆ ಕೆಲವರ ಕುತಂತ್ರದಿಂದ ಸಾಧ್ಯವಾಗಲಿಲ್ಲ, ಪೊಲೀಸರಿಗೆ ಪರಿಷತ್ತಿನ ಸದಸ್ಯ ಬಲ ನಾಲ್ಕು ಲಕ್ಷ ಎಲ್ಲರೂ ಬಂದರೆ ಹೇಗೆ ನಿಭಾಯಿಸಲು ಸಾಧ್ಯ ಎಂದು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದಕ್ಕಾಗಿ ಸುರಕ್ಷತೆ ಕಾರಣದಿಂದ ಅನುಮತಿ ನಿರಾಕರಿಸಿದ್ದಾರೆ.
ಮನು ಬಳಿಗಾರ ಕಾಲದಲ್ಲಿ ವಸುಂಧರಾ ಭೂಪತಿ ಕೆಲಸ ಮಾಡಿದ್ದಾರೆ, ನಾನು ಚುಣಾವಣೆಗೆ ಸ್ಪರ್ಧಿಸಿದಾಗ ನನಗೆ ಮತ ಹಾಕದಂತೆ ಅಪಪ್ರಚಾರ ಮಾಡಿದ್ದಾರೆ, ನೇರವಾಗಿ ಸ್ಪರ್ದಿಸದೆ ಇನ್ನೂ ಕೆಲವರು ಹಿಂಬಾಗಿಲಿನಿಂದ ಕೆಲಸ ಮಾಡುತ್ತಿದ್ದಾರೆ, ಇವರು ನಡೆಸಿದ ಯಾವ ವಾರ್ಷಿಕ ಸಭೆಗೆ 500ಕ್ಕೂ ಅಧಿಕ ಜನ ಬಂದಿಲ್ಲ ನಾನು ಅಧ್ಯಕ್ಷನಾದ ಪ್ರಥಮ ವರ್ಷವೇ 600ಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ಆಯವ್ಯಯವನ್ನು ಯಾರು ರಸ್ತೆಯ ಮೇಲೆ ನಿಂತು ಕೇಳಿದರೆ ನಾವು ನೀಡುವದಿಲ್ಲ, ನಮಗೆ ಮಾರ್ಗಸೂಚಿಗಳಿವೆ ಆ ಪ್ರಕಾರ ಮಂಡಿಸುತ್ತೆವೆ, ಅವಶ್ಯಕತೆ ಇದ್ದವರು ಮಾಹಿತಿ ಹಕ್ಕಿನಲ್ಲಿ ಪಡೆದುಕೊಳ್ಳಬಹುದು, ನಾವು ಕಳೆದ ವರ್ಷದ ಲೆಕ್ಕಪರಿಶೋಧನೆಯನ್ನು ಮಾಡಿ ಈ ವರ್ಷದಲ್ಲಿ ಮಂಡನೆ ಮಾಡುತ್ತೆವೆ ಎಂದರು.
ಇತರರಿಗೆ ಬಿಜೆಪಿ, ಕಾಂಗ್ರೆಸ್ ಸರ್ಕಾರ ಇರಬಹುದು ಆದರೆ ನಮಗೆ ಕನ್ನಡದ ಸರ್ಕಾರ, ಆದ್ದರಿಂದ ನಾವು ಹಲವಾರು ಕಾರ್ಯಕ್ರಮಗಳನ್ನು ಮಾಡಲು ಆರ್ಥಿಕ ತೊಂದರೆ ಇದೆ, ಆದರೆ ನಾವು ಸರ್ಕಾರದ ಜೊತೆ ಪೈಪೋಟಿ ಮಾಡುವದಿಲ್ಲ ಎಂದರು.
ಹಲವಾರು ಸಮಾರಂಭ ಹೊಟೇಲ್ ಗಳಲ್ಲಿ ಕನ್ನಡದ ಶಬ್ದ ಬಳಸಬೇಕು, ವೈಟ್ ರೈಸ್, ಐಟಮ್, ಅಂಕಲ, ಪಪ್ಪಾ, ಮಮ್ಮಿ ಪದಗಳನ್ನು ಬಳಸದೆ ಅಕ್ಕಿ, ಅನ್ನ, ಶುಭೋದಯ, ಶುಭರಾತ್ರಿ, ತಾಯಿ, ತಂದೆ, ಅಣ್ಣ, ತಮ್ಮ ಪದಗಳನ್ನು ಬಳಸಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರು.
ಗೌರವ ಕಾರ್ಯದರ್ಶಿ ಪಟೇಲ್ ಪಾಂಡು,ಬಾಗಲಕೋಟ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿಜಯಪೂರ ಜಿಲ್ಲಾಧ್ಯಕ್ಷ ಆಶೀಮಫೀರ ವಾಲಿಕಾರ, ಗುರುನಾಥ ತಳವಾರ, ಸಂತೋಷ ತಳಕೇರಿ, ಅಬೂಬಕರ ಕುಡಚಿ ಇದ್ದರು.