ವಿಶ್ವದ ಅತೀ ಕಿರಿಯ ಮುಖ್ಯಗುರುವೆಂದು ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಬಾಬರ ಅಲಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣ ಎಂದರೆ ಬರೀ ಪುಸ್ತಕದ ಜ್ಞಾನವನ್ನು ತಿಳಿಸುವುದಲ್ಲ. ಬದಲಿಗೆ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಚಿಂತನೆಗಳನ್ನು ಬಿತ್ತಿ, ಸಮಾಜದ ಅಭಿವೃದ್ಧಿಗಾಗಿ ಮಕ್ಕಳನ್ನು ತಯಾರಿಸುವುದಾಗಿದೆ ಎಂದು ವಿಶ್ವದ ಅತೀ ಕಿರಿಯ ಮುಖ್ಯಗುರುವೆಂದು ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಬಾಬರ ಅಲಿ ಹೇಳಿದರು.
ನಗರದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು; ಸಮಾಜಕ್ಕೆ ಒಳ್ಳೆಯದನ್ನು ಮಾಡಿದರೆ ಆ ದೇವರು ನಮಗೆ ಒಳಿತನ್ನು ಮಾಡುತ್ತಾನೆ. ಆದರೆ ಮಾಡುವ ಕಾರ್ಯದಲ್ಲಿ ಆತ್ಮತೃಪ್ತಿ ಇರಬೇಕು. ಯಾವುದೇ ಕಾರ್ಯವಾಗಲಿ ಉತ್ಸಾಹ ರಹಿತವಾಗಿ ಮಾಡಿದರೆ ಅದರಲ್ಲಿ ಯಾವುದೇ ಹುರುಳಿರುವುದಿಲ್ಲ. ಅದನ್ನು ಚಿಕ್ಕ ವಯಸ್ಸಿನಿಂದಲೂ ಕಂಡು ಕೊಂಡಿದ್ದ ನಾನು ಅದೇ ಉತ್ಸಾಹದೊಂದಿಗೆ ಚಿಕ್ಕವಯಸ್ಸಿನಲ್ಲಿಯೇ ಬೋಧನಾ ಕಾರ್ಯ ಶುರು ಮಾಡಿದೆ. ಅದರ ಜೊತೆಯಲ್ಲಿ ಬಂಗಾಳದಲ್ಲಿರುವ ಬಡ ಮಕ್ಕಳ ಶಿಕ್ಷಣಕ್ಕೆ ನಾನು ನೆರವಾಗಬೇಕು ಎಂದು ಹೊರಟಿದ್ದರ ಫಲವಾಗಿ ಇಂದು ಇಷ್ಟು ಮಹತ್ವಾಕಾಂಕ್ಷೆಯುಳ್ಳ ಕಾರ್ಯವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.
ಒಂದೊಳ್ಳೆ ಕಾರ್ಯವನ್ನು ಮಾಡುವಾಗ ಸಮಾಜದಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತವೆ. ಹಾಗೆಂದು ಅವುಗಳಿಗೆ ಹೆದರಿ ಹಿಂದೆ ಹೆಜ್ಜೆ ಇಡುವುದಕ್ಕಾಗುತ್ತದೆಯೇ? ಖಂಡಿತ ಇಲ್ಲ. ಎದುರು ಬರುವ ಅಡ್ಡಿಗಳನ್ನು ಅಡ್ಡಗಟ್ಟಿ ದಾಟಿದಾಗ ಮಾತ್ರ ನಿಶ್ಚಿತ ಗುರಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಯಾವುದೇ ಹಂತದಲ್ಲಿಯೂ ತಾಳ್ಮೆ ಕಳೆದುಕೊಳ್ಳಬಾರದು. ಎಲ್ಲಿ ತಾಳ್ಮೆ, ಶಾಂತಿ ಹಾಗೂ ಸಮರ್ಪಣಾ ಭಾವವಿರುತ್ತದೆಯೋ ಅಲ್ಲಿ ಮಾಡುವ ಕಾರ್ಯಗಳು ಯಶಸ್ಸಿನ ದಾರಿಯಲ್ಲಿ ಸಾಗುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸಹ ಇಂತಹ ಚಿಂತನೆಗಳನ್ನು ಅಳವಡಿಸಿಕೊಂಡು ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್; ಶಿಸ್ತು ಎನ್ನುವುದು ಯಶಸ್ಸಿನ ರಾಜಮಾರ್ಗವಾಗಿದೆ. ಶಿಸ್ತನ್ನು ಅಳವಡಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಮಾತನಾಡಿದರು.
ಆಂಗ್ಲ ವಿಭಾಗದ ಮುಖ್ಯಸ್ಥೆ ಶ್ರದ್ಧಾ ಜಾಧವ ಪ್ರಸ್ತಾವಿಕವಾಗಿ ಮಾತನಾಡಿದರು.
ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು. ಬಂಜಾರಾ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ತೆನಿಹಳ್ಳಿ, ದಿಕ್ಸೂಚಿ ಕೋಚಿಂಗ್ ಕ್ಲಾಸ್‌ನ ಮುಖ್ಯಸ್ಥರಾದ ಪ್ರಕಾಶ ಬಿರಾದಾರ ಸೇರಿದಂತೆ ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರದಲ್ಲಿ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ ಜರುಗಿತು.