ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರು ಭೌತಿಕ, ಅಧ್ಯಾತ್ಮೀಕ ಸತ್ಯ ತತ್ವಗಳನ್ನು ಜಗತ್ತಿಗೆ ನೀಡಿದ ಮಹಾತ್ಮರು ಎಂದು ಉಪನ್ಯಾಸಕಿ ಶಿಲ್ಪಾ ಭಸ್ಮೆ ಹೇಳಿದರು.
ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಮಾಸಿಕ ಶಿವಾನುಭವ ಗೊಷ್ಠಿಯಲ್ಲಿ ಶರಣ ಘಟವಾಳಯ್ಯನವರ ಬದುಕು ಮತ್ತು ಅನುಭಾವ ಕುರಿತು ಉಪನ್ಯಾಸ ನೀಡಿದ ಅವರು ಬಸವಾದಿ ಶರಣರ ವಚನಕಾರರಲ್ಲಿ ಶರಣ ಘಟವಾಳಯ್ಯನವರು ಪ್ರಮುಖರು. ಅವರ ವಚನಗಳಲ್ಲಿ ಆತ್ಮ ಸಾಕ್ಷಾತ್ಕಾರ, ಜ್ಞಾನ ಸಾಕ್ಷಾತ್ಕಾರ, ನಡೆ, ನುಡಿ, ಸತ್ಯ, ಶುದ್ಧ ಕಾಯಕ ಅರ್ಥಹೀನ ಬದುಕಿನ ಡಾಂಬೀಕ ಭಕ್ತಿ ಹೀಗೆ ಅವರ ವಚನಗಳಲ್ಲಿ ಕಾಣುತ್ತೇವೆ. ಚಿಕ್ಕಯ್ಯಪ್ರೀಯ ಸಿದ್ಧಲಿಂಗ ಎಂಬ ಅಂಕಿತ ನಾಮದಿಂದ ೧೪೭ ವಚನಗಳನ್ನು ರಚಿಸಿದ್ದಾರೆ. ಚರಿತ್ರೆಕ್ಕಿಂತ ಸಾಧನೆ ಮುಖ್ಯ. ಶರಣರನ್ನು ನೆನೆಯುವುದು ಜನಾಂಗದ ಉನ್ನತಿಗಾಗಿ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಶರಣರಲ್ಲಿ ಅಗ್ರಸ್ಥಾನ ಪಡೆದವರು ಘಟವಾಳಯ್ಯನವರು ಸಮರ್ಪಕವಾದ ಚಿಂತನೆಯಿಂದ ವಚನ ರಚಿಸಿದ್ದಾರೆ. ಇಂದು ಶರಣ ತತ್ವ ಸಿದ್ದಾಂತ ನಾವೆಲ್ಲಾ ಒಂದಾಗಿ ಅನುಸರಿಸಿ ಬಾಳಬೇಕು ಮುನ್ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಿಜಯಪುರ ಮಹಾನಗರಪಾಲಿಕೆಯ ಮಹಾಪೌರರಾಗಿ ಆಯ್ಕೆಯಾದ ಎಸ್.ಎಂ. ಕರಡಿ ಅವರನ್ನು ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಅಧ್ಯಕ್ಷ ವಿ.ಸಿ. ನಾಗಠಾಣ ಹಾಗೂ ಪದಾಧಿಕಾರಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಶಿವಲೀಲಾ ಮಠಪತಿ ಮಾತನಾಡುತ್ತ ಶರಣ ಘಟವಾಳಯ್ಯನವರ ನಿಷ್ಟುರತೆ, ಗುರು, ಲಿಂಗ, ಜಂಗಮ ಏಕಾಗ್ರತೆ, ಧ್ಯಾನ, ನಿಯಮ ಆಚರಣೆ ಅವರಲ್ಲಿತ್ತು ಎಂದರು.
ಕಾರ್ಯಕ್ರಮದಲ್ಲಿ ಅಪ್ಪಾಸಾಹೇಬ ಕೋರಿ, ಗಂಗಾಧರ ಸಾಲಕ್ಕಿ, ಎಂ.ಎಂ. ಅವರಾದಿ, ಕಾಶೀನಾಥ ಅಣೆಪ್ಪನವರ, ವಿವೇಕಾನಂದ ಹುಂಡೇಕಾರ, ಬಿ.ವಿ. ಪಟ್ಟಣಶೆಟ್ಟಿ, ಪಿ.ಎನ್. ಕೌಜಲಗಿ, ಶಶಿಧರ ಶಿರಹಟ್ಟಿ ಉಪಸ್ಥಿತರಿದ್ದರು. ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಸಹದೇವ ನಾಡಗೌಡರ ವಂದಿಸಿದರು.
ಕಾರ್ಯಕ್ರಮದಲ್ಲಿ ಶರಣರು, ಶರಣೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.