ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಅವರು ಈ ದೇಶಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದು, ಇಂತಹ ಮಹಾನ್ ವ್ಯಕ್ತಿಗಳಲ್ಲಿರುವ ಪ್ರಾಮಾಣಿಕತೆ, ತ್ಯಾಗ, ನಿಷ್ಠೆಯಂತಹ ಉತ್ತಮ ಸಂದೇಶಗಳು, ತತ್ವಾದರ್ಶಗಳು ಹಾಗೂ ಜೀವನ ಮೌಲ್ಯಗಳನ್ನು ಮುಂದಿನ ಯುವಪಿಳಿಗೆಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಅ. ೨ರಂದು ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮಕ್ಕೆ ಚರಕದಲ್ಲಿ ನೂಲುವ ಮೂಲಕ ಚಾಲನೆ ನೀಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಾತನಾಡಿ, ಬ್ರಿಟೀಷ್ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಲ್ಲಿದ್ದು, ತಮ್ಮ ಬದುಕು, ಸರ್ವಸ್ವವನ್ನೇ ದೇಶಕ್ಕೆ ಅರ್ಪಿಸಿ ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುವ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಮಾದರಿಯಾದವರು ಮಹಾತ್ಮ ಗಾಂಧೀಜಿಯವರು ಎಂದು ಹೇಳಿದರು.ಸತ್ಯ ಅಹಿಂಸಾ ಮೂಲಕ ಹೋರಾಟ, ಸ್ವಚ್ಛತೆ, ಗ್ರಾಮ ಸ್ವರಾಜ್ಯದ ಕಲ್ಪನೆ ನೀಡಿದ್ದಾರೆ.
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕುರಿತು ಆಲಮಟ್ಟಿಯ ಎಂ ಎಚ್ ಎಂ ಪದವಿ ಪೂರ್ವ ಕಾಲೇಜಿನ ಮಹೇಶ ಗಾಳಪ್ಪಗೋಳ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ವಿಜಯಪುರದ ಉಪವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ,ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಸಿ.ಕೆ.ಹೊಸಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಪ್ರವಾಸೋದ್ಯಮ ಇಲಾಖೆಯ ಮಲ್ಲಿಕಾರ್ಜುನ ಭಜಂತ್ರಿ, ಕ್ರೀಡಾಧಿಕಾರಿ ಎಸ್ ಜಿ.ಲೋಣಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಗೋಣಸಗಿ,ಪೀಟರ್ ಅಲೆಕ್ಸಾಂಡರ್, ಬಾಬುಗೌಡ ಪಾಟೀಲ,ಬೇನಾಳ, ಅಡಿವೆಪ್ಪ ಸಲಗಲ್ ದೇವೇಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಶ್ರೀಮತಿ ಸಾವಿತ್ರಿ ದಳವಾಯಿ, ನಿವೃತ್ತ ಶಿಕ್ಷಕ ಎಚ್. ಮಮದಾಪುರ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Related Posts
Add A Comment