ಭಕ್ತಿ ಸಾಹಿತ್ಯೋತ್ಸವ | ದಯಾನಂದ ನೂಲಿ ಗೆ ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ
ಬೆಳಗಾವಿ: ಪಂ.ಪುಟ್ಟರಾಜರು ಕನ್ನಡ ನಾಡು ಕಂಡ ಅಪರೂಪದ ಮಾಣಿಕ್ಯವಾಗಿದ್ದರು. ಕಣ್ಣಿದ್ದವರಿಗಿಂತ ಅಸಾಧ್ಯವಾದ ಧಿವ್ಯದೃಷ್ಠಿ ಹೊಂದಿದ್ದರು. ಭೌತಿಕ ಅಂಧತ್ವವನ್ನ ಮೀರಿ ಸಾವಿರಾರು ಅಂಧರ ಬೆಳಕಾಗಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದರು. ಸಾಹಿತ್ಯ, ಸಂಗೀತಕ್ಕೂ ಅಪಾರ ಸೇವೆ ಸಲ್ಲಿಸಿದ ಅವರು ಕನ್ನಡ, ಹಿಂದಿ, ಸಂಸ್ಕೃತ ಸೇರಿ ೮೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವುದು ಸಾಮಾನ್ಯ ಸಂಗತಿಯಲ್ಲ. ಅಂತಹವರ ಹೆಸರಿನಲ್ಲಿ ೨೩ ವರ್ಷಗಳಿಂದ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿರುವ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾರಂಜಿ ಮoದಂ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಬೆಳಗಾವಿಯ ಸರಸ್ವತಿ ವಾಚನಾಲಯದಲ್ಲಿ ಆಯೋಜಿಸಿದ್ದ ‘ಪದ್ಮಭೂಷಣ’ ಡಾ. ಪಂ. ಪುಟ್ಟರಾಜ ಶಿವಯೋಗಿ ಭಕ್ತಿ ಸಾಹಿತ್ಯೋತ್ಸವ-೨೩ ಉಧ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಆಶೀರ್ವವಚನ ನೀಡಿದರು.
ಭಕ್ತಿ ಸಾಹಿತ್ಯೋತ್ಸವದ ಪ್ರಮುಖ ಭಾಗವಾದ, ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಮರುಳಶಂಕರದೇವರು ಅನುಭಾವ ಯಾತ್ರೆ ಕೃತಿ ಕರ್ತರಾದ, ಚಿಕ್ಕೋಡಿಯ ಖ್ಯಾತ ವೈದ್ಯ ಡಾ. ದಯಾನಂದ ಈ. ನೂಲಿ ಇವರಿಗೆ ರಾಜ್ಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಕೃತಿ ಕುರಿತು, ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ, ಸಾಹಿತಿ ಡಾ. ರಾಜಶೇಖರ ಬಿರಾದಾರ ಕೃತಿ ಅಂತರಂಗವನ್ನು ತೆರೆದಿಟ್ಟರು.
ಪುಟ್ಟರಾಜ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ದಯಾನಂದ ನೂಲಿಯವರು, ಶರಣ ಚಿಂತನೆಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಮಹತ್ವ ಹೊಂದಿದ್ದು, ಅಧನಿಕ ಧಾವಂತದ ಬದುಕಿಗೆ ಏಕಮೇವ ಪರಿಹಾರಗಳಾಗಿವೆ ಎಂದರು.
ಮುಖ್ಯ ಅತಿಥಿಯಾಗಿ ಗೋಕಾಕದ ಶರಣ ಮಹಾಂತೇಶ ಗಂಗಪ್ಪಣ್ಣ ತಾಂವಶಿಯವರು ಮಾತನಾಡಿದರು.
ಶಿವಪಂಚಾಕ್ಷರಿ ಸ್ವಾಮಿಗಳು ಜಗದ್ಗುರು ದುರದುಂಡೇಶ್ವರ ಶಾಖಾಮಠ ವೇದಿಕೆಯಲ್ಲಿ ಇದ್ದರು. ದಾವಣಗೆರೆ ಶಿವಬಸಯ್ಯ ಚರಂತಿಮಠ ಪೂಜ್ಯರ ಕುರಿತು ಉಪನ್ಯಾಸ ನೀಡಿದರು.
ಡಾ. ಸುಮಾ ಹಡಪದ ಹಳಿಯಾಳ, ಪಂ. ರಾಜಪ್ರಭು ಧೋತ್ರೆ ಬೆಳಗಾವಿ, ವಿದ್ಯಾ ಮಗದುಮ ಗೋಕಾಕ ಇವರುಗಳ ವಚನ ಭಕ್ತಿಗೀತ ಸಂಗೀತ ನಡೆಯಿತು. ವಾಮನ್ ವಾಗೂಕರ್ ಶಿವಾಜಿ ಜಾಧವ ದಿನೇಶ ಜುಗುಳಿ ಸಾಥ್ ನೀಡಿದರು. ಉಮಾ ಸಂಗೀತ ಪ್ರತಿಷ್ಠಾನ ಕಲಾವಿದರು ಪ್ರಾರ್ಥಿಸಿದರು.
ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವೇ.ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿ, ೬ನೆಯ ಭಕ್ತಿ ಸಾಹಿತ್ಯ ಸಮ್ಮೇಳನವನ್ನು ಮುಂದಿನ ವರ್ಷ ಅದ್ದೂರಿಯಾಗಿ ಹಮ್ಮಿಕೊಳ್ಳುವುದಾಗಿ ಹೇಳಿದರು.
ಗಿರಿಜಾ ಮುಳಗುಂದ ಸ್ವಾಗತಿಸಿದರು. ಸಮಿತಿಯ ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ವಂದಿಸಿದರು. ಸೋಮಶೇಖರ ಮಗದುಮ್ ಗೋಕಾಕ ನಿರೂಪಿಸಿದರು.

