ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಪಂಚಾಯತಿಯ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ‍್ಯೋತ್ಸವದ ಶುಭಾಶಯ ಕೋರಿ, ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರ-ಧೀರರ ತ್ಯಾಗ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ‍್ಯ ಸಂದಿದೆ. ಈ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿರುವ ಗಾಂಧಿ ಭವನ ಮಾದರಿ ಎನಿಸಿದೆ. ಇಲ್ಲಿನ ಪ್ರಶಾಂತ ವಾತಾವರಣದಲ್ಲಿರುವ ಗಾಂಧಿ ಭವನವು ಪ್ರೇರಣಾ ತಾಣವಾಗಿದೆ. ಗಾಂಧೀಜಿಯವರ ಹೋರಾಟದ ಬದುಕು, ಅವರು ಅನುಸರಿಸಿದ ತತ್ವಾದರ್ಶಗಳ ಸಮಗ್ರ ಮಾಹಿತಿ ವಿವರ ಒಳಗೊಂಡಿರುವ ಗಾಂಧಿ ಭವನವಕ್ಕೆ ಯುವಕರು, ನಾಗರಿಕರು ಭೇಟಿ ನೀಡಿ, ವೀಕ್ಷಣೆ ಮಾಡುವ ಮೂಲಕ ಅರಿತುಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿಗಳು ಗಾಂಧಿ ಭವನ ವೀಕ್ಷಿಸಿ, ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ವಾರ್ತಾಧಿಕಾರಿ ಅಮರೇಶ ದೊಡಮನಿ, ಗಾಂಧಿ ಭವನದ ನಿರ್ವಹಣಾ ಸಮಿತಿ ಸದಸ್ಯರಾದ ಫಿರೋಜ್ ರೋಜಿಂದಾರ, ಪೀಟರ್ ಅಲೆಕ್ಸಾಂಡರ್, ನೇತಾಜಿ ಗಾಂಧಿ, ಬಾಪುಗೌಡ ಪಾಟೀಲ ಶೇಗುಣಸಿ ಸೇರಿದಂತೆ ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಶ್ರೀಮತಿ ಮಂಜುಳಾ, ವೈಷ್ಣವಿ, ವಿದ್ಯಾಶ್ರೀ ಹೊಸಮನಿ, ನಾಗೇಶ ಸಾಗರ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರ-ಸಿಬ್ಬಂದಿ, ಉಪಸ್ಥಿತರಿದ್ದರು.

