ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಪ್ರೀತಿಯ ದೀಪ್ತಿ
ವಿವಾಹ ಮಹೋತ್ಸವದ ಭರ್ಜರಿ ಔತಣಕೂಟದಲ್ಲಿ ವೈಭವೀಕರಣ ಎಲ್ಲೆಡೆ ತುಂಬಿ ತುಳುಕುತ್ತಿತ್ತು. ಕಣಕಣದಲ್ಲೂ ನಳನಳಿಸುವ ಬೆಳದಿಂಗಳು ಕಿರಣಗಳಂತಿದ್ದ ನಿನ್ನ ಅಲ್ಲಿ ಕಂಡು ಅರೆಕ್ಷಣ ಪುಳಕಗೊಂಡೆ. ಪಾರ್ಟಿಯ ದೀಪಗಳ ಬೆಳಕಿನಲ್ಲಿ ನೀನುಟ್ಟ ಗಿಳಿ ಹಸಿರಿನ ಒಡಲಿನ ರೇಷ್ಮೆ ಸೀರೆ ಮಿಂಚುತ್ತಿತ್ತು. ನಿನ್ನ ಸುಂದರ ಮೈಕಟ್ಟಿಗೆ ಮುದ್ದಾಗಿ ಒಪ್ಪಿತ್ತು. ಅಗಲವಾದ ಬೆನ್ನನ್ನು ಅಲಂಕರಿಸಿದ ಡೋರಿ ಹಚ್ಚಿದ ರವಿಕೆ ನೀಳವಾದ ಜಡೆ ನಿನ್ನಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಡೈಮಂಡ್ ಸರವು ನೀಳ ಕುತ್ತಿಗೆಯ ಅಂದಕ್ಕೆ ಹೊಸ ಮೆರಗನ್ನು ತಂದಿತ್ತು. ಕಿವಿಯಲ್ಲಿನ ಲೋಲಕಗಳು ನಿನ್ನ ಕೆನ್ನೆಯನ್ನು ಮುದ್ದಿಸುತ್ತ ಆಡುತ್ತಿದ್ದವು. ತಂಗಾಳಿಗೆ ಹಾರುತ್ತಿದ್ದ ಮುಂಗುರುಳು ಬಟ್ಟಲು ಕಂಗಳಿಗೆ ಹಚ್ಚಿದ ಕಾಡಿಗೆ ಕೆಂದುಟಿಗಳ ಮೇಲಿನ ಕಿರುನಗು ಕೋಟಿ ದೀಪಗಳನ್ನು ಒಮ್ಮೆಲೇ ಹಚ್ಚಿದಂತಿತ್ತು. ಪ್ರತಿ ಹೆಜ್ಜೆಯಲ್ಲಿ ಒಂದು ಗಾಂಭಿರ್ಯ ಮತ್ತು ಲಾಸ್ಯವಿತ್ತು. ಹೆಜ್ಜೆಗೆ ತಕ್ಕಂತೆ ಸಣ್ಣ ನಡುವಿನ ಬಳಕು ನೋಡುವವರ ಗಮನವನ್ನು ಸೆಳೆಯುತ್ತಿತ್ತು. ಕಣ್ಣು ಕೋರೈಸುವ ಮೈಕಟ್ಟಿಗೆ ಮೈಮರೆತು ನಿಂತಿದ್ದ ನನ್ನನ್ನು ಪ್ರೇಮಲೋಕಕ್ಕೆ ಕರೆದೊಯ್ದಿತ್ತು. ಹಲೋ, ಹಾಯ್ ಎಂದು ಪರಿಚಯದವರೆಲ್ಲ ಮಾತನಾಡಿಸಿದಾಗ ದೇಶಾವರಿ ನಗೆಯಲ್ಲಿ ಉತ್ತರಿಸುತ್ತಿದ್ದೆ. ಕಣ್ಣು ಮಾತ್ರ ನಿನ್ನ ಮೇಲೆ ನೆಟ್ಟಿತ್ತು. ನಿನ್ನ ಆಗಮನ ನನಗೆ ಅಚ್ಚರಿಯ ಜೊತೆಗೆ ಅಪಾರ ಖುಷಿ ತಂದಿತ್ತು. ಅಂದು ರಾತ್ರಿಯೆಲ್ಲ ನಿನ್ನದೇ ಕನಸು ಕಾಣುತ್ತ ನಿದ್ದೆಗೆ ಸಂಪೂರ್ಣ ರಜೆ ನೀಡಿದ್ದೆ.
ಪ್ರೀತಿಯ ಹೆಸರಿನಲ್ಲಿ ಹಿಂದಿನ ಗೆಳತಿ ಮನಸ್ಸಿಗೆ ಸೂಜಿಯಿಂದ ಚುಚ್ಚಿ ನೋಯಸಿದ್ದಳು. ಆಕೆ ನನ್ನೊಲವಿನಲ್ಲಿ ಬಂಧಿಯಾಗಿರಲಿಲ್ಲ. ಒಲವೆಂದು ಹೆಸರಿಟ್ಟು ಉಸಿರುಗಟ್ಟಿಸಿದ್ದಳು. ಎದೆಯೊಳಗಿನ ತುಮುಲಗಳಿಗೆ ಸ್ಪಂದಿಸದೇ ಹೊರ ನಡೆದಿದ್ದಳು. ಆಕೆಯ ಸ್ನೇಹದಿಂದ ಒಳಗೊಳಗೇ ನೊಂದು ಬೆಂದು ಕುದ್ದು ಆವಿಯಾಗಿ ಇಂಗಿದ ಕಂಬನಿಯ ಗೆರೆಗಳು ನನ್ನ ಮುಖದಲ್ಲಿ ಎದ್ದು ಕಾಣುತ್ತಿದ್ದವು. ಸ್ವಾರ್ಥಿಯಿಂದ ನಿಸ್ವಾರ್ಥ ಪ್ರೀತಿಯ ನಿರೀಕ್ಷಿಸಿದ್ದೇ ದೊಡ್ಡ ತಪ್ಪಾಯಿತು. ಎಂದೋ ಹಾಡಿದ ಅನುರಾಗಕೆ ದಿನವೂ ಉಮ್ಮಳಿಸಿ ಬರುವ ದುಃಖ ತಡೆಯದೇ ರಾತ್ರಿಯೆಲ್ಲ ದಿಂಬು ಹಸಿಯಾಗುತ್ತಿತ್ತು. ಆಕೆ ಮನ ಕಲಕಿ ರಾಡಿ ಎಬ್ಬಿಸಿದ್ದೇ ಹೆಚ್ಚಾಗಿತ್ತು. ಹೀಗಾಗಿರುವಾಗ ಆಸೆಗಳ ಮೂಟೆಯನ್ನೆಲ್ಲ ಬಿಗಿ ಗಂಟು ಹಾಕಿ ಕಟ್ಟಿ ಒಗೆದಿದ್ದೆ. ಹಗಲು ಯಾವುದು ಇರುಳು ಯಾವುದು ಅರಿವಾಗದೇ ಸುಮ್ಮನೆ ಕೂರುತ್ತಿದ್ದೆ. ಏಕಾಂಗಿಯಾಗಿ ಕೊರಗಿದ್ದೆ. ಹಗಲು ಇರುಳುಗಳು ನರಕಸದೃಶವಾಗಿದ್ದವು. ಮನೆಯ ಮೂಲೆಗಳು ಬಾಗಿಲು ಕಿಟಕಿಗಳು ದಿನವೂ ನಾ ಸಾಯುವುದನು ಕಂಡು ಬಿಕ್ಕುತ್ತಿದ್ದವು.

ಬದುಕಿನ ಸೂಕ್ಷ್ಮಗಳನ್ನು ಗ್ರಹಿಸಲು ಹೆಣಗಾಡುತ್ತಿದ್ದೆ. ಜೀವನ ಸಂತೋಷದ ಶೋಧದಲ್ಲಿ ತೊಡಗಿದ್ದೆ ಆಗ ಕಣ್ಮುಂದೆ ಆಫೀಸಿನಲ್ಲಿ ಸಹೋದ್ಯೋಗಿಯಾಗಿ ಬಂದವಳೇ ನೀನು. ನಿನ್ನಲ್ಲಿ ಬುದ್ಧಿಮಟ್ಟ ಮತ್ತು ಪ್ರಬುದ್ಧತೆಯ ಆಳ ಬಹಳ. ನಿನ್ನ ಅಂದಕ್ಕೆ ಬೆರಗಾದೆ. ಎಷ್ಟೋ ತಿಂಗಳುಗಳ ಮೇಲೆ ನನ್ನ ಮುಖದಲ್ಲಿ ಕಿರುನಗು ಮೂಡಿತ್ತು.. ‘ಇಂಥ ಅಂದ ಎಲ್ಲೂ ಕಂಡಿಲ್ಲ.’ ಎಂದ ನನ್ನ ಗೆಳೆಯನಿಗೆ ಅಂದವಿದ್ದರೆ ಸಾಲದು ಅಂದವನ್ನು ಮೀರುವ ಉದಾರತೆ ಇರಬೇಕೆಂದು ನೀನಾಡಿದ ಮಾತು ಮನ ಸೆಳೆದಿತ್ತು. ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವ ಈ ಕಾಲದಲ್ಲಿ ಮತ್ತೊಬ್ಬರ ಅಳಲನ್ನು ಸಾವಧಾನದಿ ಕೇಳುವ ಕಿವಿಗಳು ತೀರಾ ವಿರಳ. ಅಂಥ ವಿರಳ ಕಿವಿಗಳಲ್ಲಿ ನಿನ್ನವು ಅಗ್ರಪಂಕ್ತಿಯಲ್ಲಿದ್ದವು. ನನ್ನ ನಾನೇ ಬಂಧೀಖಾನೆಯಲ್ಲಿ ಬಂಧಿಯಾಗಿಸಿಕೊಂಡು ನರಳುತ್ತಿದ್ದುದು ನಿನಗೆ ಹೇಗೋ ಗೊತ್ತಾಯಿತು. ಕಪ್ಪುಗಟ್ಟಿ ಮೋಡದಂತಾಗಿದ್ದ ನೋವಿಗೆ ಮಳೆ ಸುರಿಸಿ ಹಗುರವಾಗುವುದು ಹೇಗೆಂಬುದನ್ನು ಕಲಿಸಿಕೊಟ್ಟೆ. ಬೊಗಸೆ ತುಂಬ ಪ್ರೀತಿ ಹಿಡಿದು ನೀನೇ ಎದುರು ನಿಂತೆ. ಪ್ರೀತಿ ಎಂಬ ಎರಡುವರೆ ಅಕ್ಷರದ ಪದಕ್ಕೆ ಯಾವ ಗಾಯವನ್ನು ಮರೆಸುವ ಶಕ್ತಿಯಿದೆ.
ನಿನ್ನಣ್ಣನ ಮದುವೆಯ ಕರೆಯೋಲೆಯನ್ನು ನೀಡಲು ನನ್ನ ಕೋಣೆಗೆ ಆಗಮಿಸಿದ್ದನ್ನು ಎಂದೆಂದೂ ಮರೆಯಲಾರೆ. ಬೇರೆ ಕಡೆಗೆಲ್ಲ ಆಮಂತ್ರಣ ಹಂಚಿ ನನ್ನ ಬಳಿ ಬಂದಾಗ ಸಂಜೆಯಾಗಿತ್ತು. ನಿನಗೇನು ತಿನ್ನಲು ಕುಡಿಯಲು ಕೊಡಬೇಕು ಎನ್ನುವ ತವಕ ಒಂದೆಡೆಯಾದರೆ ನನ್ನೆದೆಯ ಬಡಿತದ ಸದ್ದು ಆ ನಿಶಬ್ದದಲ್ಲಿ ನಿನಗೆಲ್ಲಿ ಸ್ಪಷ್ಟವಾಗಿ ಕೇಳಿಸುತ್ತೋ ಎಂಬ ಗಾಬರಿ ಇನ್ನೊಂದೆಡೆ. ಆ ಕ್ಷಣದಲ್ಲಿ ಏನು ಮಾತನಾಡಬೇಕೆಂದು ತಿಳಿಯದೆ ಮೌನವಾಗಿದ್ದೆ. ಕುರ್ಚಿ ಇಲ್ಲದ ಬ್ಯಾಚಲರ್ ಕೋಣೆಯಲ್ಲಿ ಮಂಚದ ಮೇಲೆ ಕುಳ್ಳರಿಸಿದ್ದೆ. ನಾ ನಿಂತುಕೊಂಡೇ ಇದ್ದೆ.

ಒಮ್ಮಿಂದೊಮ್ಮೆಲೇ ಜೋರಾಗಿ ಬಿದ್ದ ಮಳೆಗೆ ಬೀಸಿದ ಬಿರುಗಾಳಿಗೆ ಕರೆಂಟ್ ಕೈ ಕೊಟ್ಟಿತು. ಮೊಬೈಲ್ ಹುಡುಕಿ ಬ್ಯಾಟರಿ ಆನ್ ಮಾಡಲು ಯೋಚಿಸಿದೆ. ಆ ಗಳಿಗೆಯಲ್ಲಿ ನನ್ನ ಕೈಗೆ ನಿನ್ನ ಕೈ ತಾಕಿತು. ಮಳೆಯ ತಂಪಿನಲ್ಲಿ ನಿನ್ನ ಕೈಗಳ ಬೆಚ್ಚಗಿನ ಸ್ಪರ್ಷ ಇಡೀ ಜಗತ್ತನ್ನೇ ಮರೆಸಿತ್ತು. ಮುಂದೆ ಹೆಜ್ಜೆ ಇಡಲು ಹೋದೆ. ನಿನ್ನ ಮುಂಗುರುಳು ನನ್ನ ಕೆನ್ನೆಯನ್ನು ಸವರತೊಡಗಿದವು. ಆ ಕ್ಷಣ ನನ್ನಲ್ಲಿಯ ಆತಂಕವನ್ನು ಮರೆಸಿತ್ತು. ಪ್ರೀತಿಯ ತೇಲುವಿಕೆಯನ್ನು ನೀಡಿತ್ತು. ಇಬ್ಬರ ಉಸಿರಾಟದ ವೇಗ ಹೆಚ್ಚಾಗುತ್ತಿತ್ತು. ಆ ಉಸಿರಿನ ಬಿಸಿಗೆ ಹೃದಯಗಳು ಹತ್ತಿರವಾದವು. ಧೋ ಎಂದು ಸುರಿವ ಮಳೆಗೆ ಗಾಳಿಯೊಂದಿಗೆ ಬೀಸುತ್ತಿದ್ದ ತಣ್ಣನೆಯ ನೀರಿನ ಹನಿಗಳು ಮೈಮೇಲೆ ಬಿದ್ದಾಗ ಇಬ್ಬರೂ ನಡುಗಿದೆವು. ಆ ಚಳಿಗೆ ಹೆದರಿ ಮೆಲ್ಲನೆ ನನ್ನೆದೆಯ ಆಸರೆಗೆ ಸರಿದಾಗ ಇಬ್ಬರ ನಡುವಿನ ಅಂತರ ಕರಗಿ ಹೋಯಿತು. ನನಗೇ ಅರಿವಿಲ್ಲದಂತೆ ಸೊಂಟದ ಸುತ್ತ ಸುತ್ತಿದ ಕೈಗಳು ಒದ್ದೆಯಾದ ನಡುವನ್ನು ಸವರಿದಾಗ ಇಬ್ಬರ ದೇಹದಲ್ಲೂ ಹೊಸ ಸಂಚಲನ ಮೂಡಿತ್ತು. ಮಳೆ ಹನಿಯ ಸಿಂಚನ ಚುಂಬನಕೆ ಮನ ತಾಳ ಹಾಕಿ ತಕದಿಮಿ ಹೇಳುತ್ತಿತ್ತು. ಇನ್ನೇನು ತುಟಿಗಳು ತೆರೆದುಕೊಳ್ಳಲು ತಯಾರಾಗುತ್ತಿದ್ದ ಸಮಯದಲ್ಲಿ ಹೋದ ಕರೆಂಟ್ ಮರಳಿ ಬಂತು. ಆ ಮಳೆ ಹನಿಗಳು ಇಬ್ಬರ ಪವಿತ್ರ ಪ್ರೇಮಕ್ಕೆ ಅಸ್ತು ಎಂದು ಹೇಳಿದ್ದವು. ಒಲವಿನ ಅಮಲು ಮತ್ತಷ್ಟು ಏರಿತ್ತು. ನಡೆದ ಘಟನೆಗೆ ನಾಚಿಕೊಳ್ಳುತ್ತ ತಡವರಿಸುತ್ತ ಸಾವರಿಸಿಕೊಂಡು ಅಣ್ಣನ ಮದುವೆಗೆ ಬರ್ತಿಯಾ ತಾನೆ? ಎಂದು ಹುಸಿಮನಸಿನ ಜೊತೆ ಜೋರಿನ ಪ್ರಶ್ನೆ ಒಂದೇ ಉಸಿರಿನಲ್ಲಿ ಕೇಳಿದ್ದೆ.
ಮನದ ನೋವಿಗೆ ಮುಲಾಮು ಸವರಿದೆ. ಸನಿಹ ಬಂದು ಬಿಗಿದಪ್ಪಿಕೊಂಡು ಸಾಂತ್ವನ ಹೇಳಿದೆ. ಮುರಿದ ಮನಸ್ಸನ್ನು ಮರು ಜೋಡಿಸುವಲ್ಲಿ ಯಶಸ್ವಿಯಾದೆ. ನನ್ನ ದೋಷಗಳ ಬಗ್ಗೆ ಹೇಳಿದ್ದಲ್ಲದೇ ಅದಕ್ಕೆ ಪರಿಹಾರವನ್ನು ಸೂಚಿಸಿದ ಬಗೆಗೆ ಬೆರಗಾದೆ. ಮಡುಗಟ್ಟಿದ ಹೃದಯ ತಂತಿ ಮೀಟುವಲ್ಲಿ ಗೆದ್ದೆ. ಒಣಗಿದ ಬಾಳಬಳ್ಳಿ ಚಿಗುರಿಸಿದೆ ಚೈತ್ರಗೀತೆ ಹಾಡಿಸಿದೆ. ಮನವಿಂದು ಸರಿಗಮಪದ ಸವಿಜೇನಿಂದ ಸನಿದಪ ಹಾಡುತಿದೆ. ನಿನ್ನ ಮಧುರ ನೆನಪು ಕಾಡುತಿದೆ. ಭಾವನೆಗಳಿಗೆ ಬಣ್ಣ ಹಚ್ಚಿ ಕಣ್ಣಲ್ಲಿ ಮಾತನಾಡಿದ ನೆನಪಿನ ದೋಣಿಯ ಆ ಹಾಡು ಕಾಡುತಿದೆ. ನಿನ್ನ ಕಾಲ್ಗೆಜ್ಜೆ ಸದ್ದು ಕೇಳಲು ಹೃದಯ ಕುಣಿಯುತಿದೆ. ನೀನಿರದಿದ್ದರೆ ಈ ಬದುಕು ಅಂದೇ ಅಂತ್ಯ ಹಾಡುತ್ತಿತ್ತು. ಆದರೆ ನೀನು ಛಲ ಬಿಡದೇ ಬದುಕಿಗೆ ಮತ್ತೆ ಚಿಗುರುವ ಉತ್ಸಾಹ ತಂದೆ. ಕತ್ತರಿಸಿ ಹೋಗಿದ್ದ ಕರುಳ ಬಳ್ಳಿ ಮಗ ಬರುತ್ತಾನೆಂದು ಕಾಯುತ್ತಿದ್ದ ಹೆತ್ತವರಿಗೆ ಹರುಷ ತಂದೆ ಮತ್ತೆ ಬೆಸುಗೆ ಬೆಸೆದೆ.
ತಾವರೆ ಹೂವಿನಂತೆ ಹುಣ್ಣಿಮೆಯ ಶಶಿಯಂತೆ. ಜೇನಿನ ಸವಿಯಂತೆ ಹೂಬನದಿ ಸುಗಂಧದಂತೆ ನನ್ನೊಳಗೊಳಗೆ ಒಲವ ಲಹರಿಯಾಗಿ ಒಡಮೂಡಿದೆ. ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡುತ್ತಿದ್ದೇನೆ. ಚೆಲುವೆ ನಿನ್ನೊಲವು ಬೇಕೆಂದು ಬಳಿಗೆ ಬಂದಿರುವೆ. ನಿನ್ನ ಜೊತೆ ನನ್ನ ಕಥೆ ಮುಂದುವರೆಸುವೆ. ಹೃದಯ ತೆರೆದಿದೆ ಬಾ ಸೇರಿಕೊ. ಅರ್ಧಕ್ಕೆ ನಿಂತ ಮುತ್ತಿನಾಟವನು ಜೀವನಪೂರ್ತಿ ಮುಂದುವರೆಸೋಣ.
ಇಂತಿ ನಿನ್ನ ದೀಪಕ


