ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಅದಕ್ಕೆ ಸ್ಪಂದಿಸಬೇಕಾಗಿದ್ದ ಆರೋಗ್ಯ ಇಲಾಖೆಯ ಜಿಲ್ಲಾಧಿಕಾರಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆ ತೋರಿದ್ದು, ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಕಂದಾಯ ಉಪವಿಭಾಗ ಅಧಿಕಾರಿ ಚಿದಾನಂದ ಗುರುಸ್ವಾಮಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ನಗರದಲ್ಲಿರುವ ತಾಲೂಕು ಆಡಳಿತ ಸೌಧದ ಕಂದಾಯ ಉಪವಿಭಾಗ ಕಾರ್ಯಾಲಯದಲ್ಲಿ ನಗರದ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕಾರ್ಯತರು ತಾಲೂಕು ಸರಕಾರಿ ಆಸ್ಪತ್ರೆಯ ಬಗ್ಗೆ ನಿರ್ಲಕ್ಷ್ಯ ಮತ್ತು ಗರ್ಭಿಣಿಯರಿಗೆ ನಿಷ್ಕಾಳಜಿ ಹೊಂದಿರುವ ಆರೋಗ್ಯ ಜಿಲ್ಲಾಧಿಕಾರಿ ಮೇಲೆ ಜರೂರು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಅಯೂಬ್ ನಾಟೀಕಾರ, ನ್ಯಾಯವಾದಿ ವಿಕಾಸ ಹೊಸಮನಿ ಮಾತನಾಡಿ, ತಾಲ್ಲೂಕಿನಲ್ಲಿ ಗರ್ಭಿಣಿ ಮಹಿಳೆಯರು ಬಾಣಂತನ ಹಾಗೂ ಇತರೆ ತುರ್ತು ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ಆಗಮಿಸಿದಾಗ ಅಗತ್ಯವಾದ ಸ್ತ್ರೀರೋಗ ತಜ್ಞ (Gynecologist) ವೈದ್ಯರು ಲಭ್ಯವಿಲ್ಲದಿರುವುದು ಅತ್ಯಂತ ಆತಂಕಕಾರಿ ಹಾಗೂ ಆಡಳಿತಾತ್ಮಕ ವೈಫಲ್ಯದ ಸಂಗತಿಯಾಗಿದೆ. ಗರ್ಭಿಣಿ ಮಹಿಳೆಯರ ಆರೋಗ್ಯ ಮತ್ತು ಜೀವ ರಕ್ಷಣೆ ಅತ್ಯಂತ ಮಹತ್ವದ ವಿಷಯವಾಗಿದ್ದು, ಇಂತಹ ಸಂದರ್ಭದಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಸಾರ್ವಜನಿಕರು ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ ಸಮಸ್ಯೆ ವಿವರಿಸಿದರೆ “ಸಾರ್ವಜನಿಕರ ಕಿರಿಕಿರಿಗೆ ಇದ್ದ ಇಬ್ಬರು ವೈದ್ಯರು ವರ್ಗಾವಣೆಗೊಂಡಿದ್ದಾರೆ. ಬೇಕಿದ್ದರೆ ನೀವೇ ಒಬ್ಬ ವೈದ್ಯರನ್ನು ನೇಮಕ ಮಾಡಿಸಿ” ಎಂಬ ಉಡಾಫೆಯ ಹಾಗೂ ಸಾರ್ವಜನಿಕರಿಗೆ ಅವಮಾನಕಾರಿಯಾದ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯಿಂದ ಇಂತಹ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಖಂಡನೀಯವಾಗಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವಂತದ್ದಾಗಿದೆ. ಆದ್ದರಿಂದ, ಸಾರ್ವಜನಿಕ ಆಸ್ಪತ್ರೆಗೆ ಕೂಡಲೇ ಒಬ್ಬ ಅಥವಾ ಹೆಚ್ಚಿನ ಸ್ತ್ರೀರೋಗ ತಜ್ಞ (Gynecologist) ವೈದ್ಯರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.

