ಕಾಂಗ್ರೆಸ್ ಮುಖಂಡ ಎಚ್ ಸಿ ನರಸಿಂಹಮೂರ್ತಿ ಸವಾಲು
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನ ಬನವಾಡಿ ಗ್ರಾಮದಲ್ಲಿ ಒಂದೇ ಒಂದಿಂಚು ಭೂಮಿ ನನ್ನ ಹೆಸರಿನಲ್ಲಿ ಇದ್ದರೆ, ಇದೆ ಎಂದು ಸಾಬೀತು ಮಾಡಿದರೆ ನಾನು ದೇಶ ಬಿಟ್ಟು ಹೋಗುತ್ತೇನೆ. ಅಲ್ಲದೆ ಆ ಗ್ರಾಮದ ನಿಂಗರಾಜಮ್ಮ ಮಾಡಿರುವ ಆರೋಪಗಳಲ್ಲಿ ಒಂದೇ ಒಂದು ಆರೋಪ ಸಾಬೀತರಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ನರಸಿಂಹ ಮೂರ್ತಿ ಸವಾಲು ಹಾಕಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನರಸಿಂಹಮೂರ್ತಿ, ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಬನವಾಡಿ ಗ್ರಾಮದ ನಿಂಗರಾಜಮ್ಮ, ಶಿವಯ್ಯ ಹಾಗೂ ಚೆನ್ನ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು. ನನ್ನ ಏಳಿಗೆ ಸಹಿಸಲಾಗದೆ, ರಾಜಕೀಯವಾಗಿ ಮುಗಿಸಲು ಕೆಲವರು ನಿಂಗರಾಜಮ್ಮ ಅವರನ್ನು ಮುಂದೆಬಿಟ್ಟು ಮಾಡುತ್ತಿರುವ ಷಡ್ಯಂತ್ರ. ನಾನು ಇರೋದು ಹೆಚ್ ಡಿ ಕೋಟೆ ಕೋಟೆಯಲ್ಲಿ, ಆದರೆ ನಾನೊಬ್ಬ ದಲಿತ ಸಮುದಾಯದ ಮುಖಂಡರಾಗಿರುವ ಹಿನ್ನೆಲೆ ನಮ್ಮ ಸಮಾಜದ ಆಗುಹೋಗುಗಳ ಬಗ್ಗೆಆಯಾ ಗ್ರಾಮದ ಮುಖಂಡರು ನನ್ನ ಗಮನಕ್ಕೆ ತರುತ್ತಾರೆ. ಅದನ್ನು ಕುರಿತು ಚರ್ಚಿಸಲು ಗ್ರಾಮಕ್ಕೆ ಹೋಗುತ್ತೇನೆ. ಅದೇ ರೀತಿ ಬನವಾಡಿಯಲ್ಲಿ ನಿಂಗರಾಜಮ್ಮ ಹಾಗೂ ಅವರ ಪುತ್ರ ಸಂಪತ್ ಕುಮಾರ್ ಭೂಮಿ ಕಬಳಿಸಲು ನಡೆಸಿದ ಹುನ್ನಾರ ಬಗ್ಗೆ ನನ್ನ ಗಮನಕ್ಕೆ ತಂದಾಗ ಚರ್ಚಿಸಲು ಹೋಗಿದ್ದೇನೆ ಹೊರತು, ಯಾರನ್ನು ಕೊಲೆ ಮಾಡಲು, ಅಥವಾ ಬೆದರಿಕೆ ಹಾಕಲು ಹೋಗಿಲ್ಲ ಎಂದು ಸಮರ್ಥನೆ ನೀಡಿದರು.
ತಾಲೂಕಿನ ಬನವಾಡಿ ಪುನರ್ವಸತಿ ಗ್ರಾಮವಾಗಿದ್ದು, ದಲಿತ ಸಮುದಾಯಕ್ಕೆ ಸೇರಿದ ಸುಮಾರು 120 ಕುಟುಂಬಗಳು ವಾಸವಿವೆ.
1969 ರಲ್ಲಿ ಅಂದಿನ ಕಂದಾಯ ಮಂತ್ರಿಗಳಾಗಿದ್ದಎನ್ ರಾಚಯ್ಯ ಅವರು ಅಲ್ಲಿ ವಾಸವಿದ್ದ ಒಂದೊಂದು ಕುಟುಂಬಕ್ಕೆ 3 ರಿಂದ 5 ಎಕರೆ ಜಮೀನುವುಳ್ಳ ಸಾಗುವಳಿ ಹಕ್ಕು ಪತ್ರ ನೀಡಿದ್ದರು. ನನ್ನ ಮೇಲೆ ಆರೋಪ ಮಾಡಿರುವ ನಿಂಗರಾಜಮ್ಮ ಮೂಲತಃ ಬನವಾಡಿ ಗ್ರಾಮದವರಲ್ಲ. ಬದಲಾಗಿ ಕಾಳಿಹುಂಡಿ ಗ್ರಾಮದವರು. ಜಮೀನು ಪಡೆಯುವ ನಿಟ್ಟಿನಲ್ಲಿ ನಿಂಗರಾಜಮ್ಮ ತಮ್ಮ ಮಾವನ ಹೆಸರು ವೆಂಕಟಯ್ಯ ಹೆಸರನ್ನ ವೆಂಕಟಗಿರಿಯಯ್ಯ ಎಂದು ತಿದ್ದುಪಡಿ ಮಾಡಿ, ನಕಲಿ ದಾಖಲೆ ಸೃಷ್ಟಿಸಿಕೊಂಡು ಬನವಾಡಿ ಗ್ರಾಮಕ್ಕೆ ವಲಸೆ ಹೋಗುತ್ತಾರೆ.
ಸರ್ವೇ ನಂಬರ್ 30 ರಲ್ಲಿ 4.9 ಎಕ್ಕರೆ ಜಮೀನಿದ್ದು, ಪಕ್ಕದ ಸರ್ವೇ ನಂಬರ್ 16 ರಲ್ಲಿ 8 ಎಕ್ಕರೆ ಜಮೀನು ಹೊತ್ತುವರಿ ಮಾಡಿಕೊಂಡು ಪ್ರಸ್ತುತ 12 ರಿಂದ 13 ಎಕ್ಕರೆ ಜಮೀನಿನಲ್ಲಿ ಅನುಭವದಲ್ಲಿ ಇದ್ದಾರೆ. ಇದೆ ಸರ್ವೇ ನಂಬರ್ ಗೆ ಸೇರಿದ ಸರ್ಕಾರಿ ರಸ್ತೆಯಲ್ಲಿ ಮನೆ ಮತ್ತು ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ತಿರುಗಾಡಲು ತೊಂದರೆ ಕೊಡುತ್ತಾ ಸ್ಮಶಾನ ಜಾಗವನ್ನು ಅಕ್ರಮಿಸಿ ಕೊಂಡಿದ್ದಾರೆ. ಈ ವಿಚಾರವಾಗಿ ಗ್ರಾಮದ ಜನರು ಕೇಳಲು ಹೋದರೆ ದಬ್ಬಾಳಿಕೆ ಮಾಡಿಕೊಂಡು ಬರುತಿದ್ದಾರೆ, ಈ ವಿಷಯ ನನ್ನ ಗಮನಕ್ಕೆ ತಂದು ಸರಿಪಡಿಸಲು ಹೋದರೆ ನನ್ನ ಮತ್ತು ನನ್ನ ತಮ್ಮನ ಮೇಲೆ ಕೋಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದೇ ವೇಳೆ ಶಿವಯ್ಯ ಮತ್ತು ಚೆನ್ನ ಎಂಬುವವರು ಮಾಡಿರುವ ಆರೋಪವನ್ನು ಎಚ್ ಸಿ ನರಸಿಂಹಮೂರ್ತಿ ಅಲ್ಲೆಗಳೆದರು.

