ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ – ಗದಗ
ಉದಯರಶ್ಮಿ ದಿನಪತ್ರಿಕೆ
ಈ ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಅಜ್ಜ ಅಜ್ಜಿ ನಾಲ್ಕಾರು ಮಕ್ಕಳು ಅವರ ಪತ್ನಿಯರು ಮಕ್ಕಳು ಹೀಗೆ ಕೂಡು ಕುಟುಂಬವಿದ್ದು, ಹೆಣ್ಣು ಮಕ್ಕಳು ಮದುವೆಯಾಗಿ ಪರ ಊರಿನಲ್ಲಿ ಇದ್ದು, ಆಗಾಗ ಬೀಗರು ನೆಂಟರು ಹಬ್ಬ ಹುಣ್ಣಿಮೆ ಜಾತ್ರೆ ಮುಂತಾದ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರು. ಮನೆಯ ತುಂಬಾ ಹತ್ತಾರು ಮಕ್ಕಳಿದ್ದು ಕೆಲವೊಮ್ಮೆ ಯಾರು ಯಾರ ಮಕ್ಕಳು, ಯಾವ ತರಗತಿಯಲ್ಲಿ ಓದುತ್ತಾರೆ ಎಂಬುದೇ ಗೊತ್ತಾಗದಷ್ಟು ಸಂಖ್ಯೆಯಲ್ಲಿ ಮೊಮ್ಮಕ್ಕಳು ಇರುತ್ತಿದ್ದರು.
ನಂತರದ ದಿನಮಾನಗಳಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳು ಒಂದು ಕುಟುಂಬ ಎಂದು ಕರೆಸಿಕೊಂಡರು.
ಮತ್ತೆ ಮುಂದೆ ಗಂಡ ಹೆಂಡತಿ ಕೇವಲ ಒಂದು ಮಗು ಮತ್ತು ಒಂದು ಸಾಕು ಪ್ರಾಣಿ ಒಂದು ಕುಟುಂಬ ಎನಿಸಿಕೊಂಡರೆ ಇದೀಗ ಕೇವಲ ಗಂಡ ಹೆಂಡತಿ ಮಾತ್ರ ಇರುವ ನೋ ಕಿಡ್ಸ್ ನೋ ಕಿಚನ್ ಎಂಬ ಟುಕೆ ಸಂಸಾರ ಚಾಲ್ತಿಯಲ್ಲಿದೆ. ಮಕ್ಕಳು ಮತ್ತು ಅಡುಗೆ ಮಾಡುವುದು ಜವಾಬ್ದಾರಿಯ ಕೆಲಸ.. ಹಾಗಾಗಿ ಇಂದಿನ ದಂಪತಿಗಳು ಮಕ್ಕಳ ಜವಾಬ್ದಾರಿಯನ್ನು ಮತ್ತು ಅಡುಗೆಯ ಕೆಲಸದ ಜವಾಬ್ದಾರಿಯನ್ನು ಹೊರಲು ಇಚ್ಛಿಸುತ್ತಿಲ್ಲ.

ಮಕ್ಕಳಿಗೆ ಪಾರಿಸರಿಕ, ಮಾನಸಿಕ, ದೈಹಿಕ ಮತ್ತು ಕೌಟುಂಬಿಕ ಆಸರೆ ಇದ್ದಾಗ ಅವರ ಸರ್ವತೋಮುಖ ಬೆಳವಣಿಗೆ ಶತಸ್ಸಿದ್ದವಾಗಿರುತ್ತದೆ.
ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧದ ಗಾಢತೆಯನ್ನು ನಾವು ಆ ಇಬ್ಬರ ನಡುವೆ ಎಷ್ಟರಮಟ್ಟಿಗೆ ವಿಷಯಗಳು ಕುರಿತು ಚರ್ಚೆ ಮಾತುಕತೆಗಳು ನಡೆಯುತ್ತವೆ ಎಂಬುದರ ಮೇಲೆ ನಿರ್ಧರಿಸಬಹುದು. ನಂಟು ಎಂದರೆ ಸಂಬಂಧ. ಪ್ರೀತಿಯ ಪ್ರೇಮದ ಬಾಂಧವ್ಯದ ವಿಸ್ತೃತ ರೂಪವೇ ಈ ನಂಟು. ಪರಸ್ಪರರ ಮಧ್ಯ ಇರುವ ಗೌರವ ಭಾವ ಕೂಡ ಉತ್ತಮ ಸಂಬಂಧಕ್ಕೆ ಕಾರಣವಾಗುತ್ತದೆ.
ಅಕಸ್ಮಾತಾಗಿ ಯಾರಾದರೂ ನಮಗೆ ಎದುರಾಗಿ ಬರುವಾಗ ನಮ್ಮ ಕೈ ಅಪ್ಪಿ ತಪ್ಪಿ ಅವರಿಗೆ ತಾಕಿದಾಗ ನಾವು ಕೂಡಲೇ ಅವರಿಗೆ ಸಾರಿ! ಕ್ಷಮಿಸಿ ಗೊತ್ತಾಗದೆ , ಕೈ ತಾಗಿತು ಎಂದು ಹೇಳುತ್ತೀವಲ್ಲವೇ? ಇದು ನಮ್ಮ ಸೌಜನ್ಯವನ್ನು ಜೊತೆಗೆ ಹೆಚ್ಚಿನ ಅಸಂಬದ್ಧತೆಗೆ ದಾರಿ ಕೊಡದ ಸುಶೀಲತೆಯನ್ನು ತೋರುವ ಮೂಲಕ ಸಮತೋಲನವನ್ನು ಕಾಯ್ದುಕೊಳ್ಳುವ ರೀತಿ.
ಆದರೆ ಇದೇ ರೀತಿಯ ಸಮತೋಲನವನ್ನು ಕುಟುಂಬದಲ್ಲಿ ನಾವು ಕಾಯ್ದುಕೊಳ್ಳುತ್ತಿಲ್ಲ ಉದಾಹರಣೆಗೆ “ಅವರ ಬ್ರೇನ್ ಈಸ್ ಟು ಥಿಂಕ್, ನಾಟ್ ಟು ರಿಮೆಂಬರ್'” ಎಂಬ ಮಾತಿದೆ. ನಮ್ಮ ಮೆದುಳು ಇರುವುದು ಯೋಚಿಸಲು ಹೊರತು ನೆನಪಿಸಿಕೊಳ್ಳಲು ಅಲ್ಲ ಎಂಬುದು ಈ ವಾಕ್ಯದ ಅರ್ಥ. ಅತ್ಯಂತ ಕಡಿಮೆ ಪದಗಳನ್ನು ಹೊಂದಿದ್ದರೂ ಅವುಗಳಲ್ಲಿ ಅತ್ಯಂತ ಶಕ್ತಿಯುತ ಸಂದೇಶವನ್ನು ನೀಡುವಲ್ಲಿ ಈ ವಾಕ್ಯ ಯಶಸ್ವಿಯಾಗಿದೆ ಎಂದರೆ ತಪ್ಪಿಲ್ಲ.
ಪದೇಪದೇ ಅವಶ್ಯಕವಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ನಮ್ಮ ಮನಸ್ಸನ್ನು ಕೆಡಿಸಿಕೊಂಡು ಇತರರ ಮನಸ್ಸನ್ನು ಕೆಡಿಸುವಲ್ಲಿ ನಾವು ಸಫಲರಾಗುತ್ತೇವೆ, ಇದು ಸಲ್ಲದು. ನಮ್ಮ ಜೀವನದಲ್ಲಿ ನಮಗೆ ಆಗಿ ಹೋದ ನೂರಾರು ಹಿತಕರ ಘಟನೆಗಳನ್ನು ಬಿಟ್ಟು ಎಲ್ಲೋ ಒಂದು ಕಹಿ ಘಟನೆಯನ್ನು ಹಿಡಿದುಕೊಂಡು ಈಗಲೂ ಕೂಡ ಮನಸ್ಸನ್ನು ಕಹಿ ಮಾಡಿಕೊಳ್ಳುವ ಆ ಮೂಲಕ ಒಂದು ಬೃಹತ್ ಕಂದಕವನ್ನು ಸೃಷ್ಟಿ ಮಾಡುವ ಸಾಕಷ್ಟು ಜನ ನಮ್ಮ ನಡುವೆ ಇದ್ದಾರೆ. ಮಕ್ಕಳಲ್ಲಿ ಇದು ಮಿಲಿ ಮೀಟರ್ನಷ್ಟು ಇದ್ದರೆ ಹಿರಿಯರಲ್ಲಿ ಇದು ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ. ಗಂಡ ಹೆಂಡತಿ, ತಂದೆ ಮಕ್ಕಳು, ಅಣ್ಣ ತಮ್ಮ, ಅಕ್ಕ ತಂಗಿ ಹೀಗೆ ಎಲ್ಲ ರೀತಿಯ ಸಂಬಂಧಗಳು ವ್ಯಾವಹಾರಿಕವಾಗಿದ್ದು ಸಂಬಂಧಗಳಲ್ಲಿ ಅವಹೇಳನ, ಅವಮಾನ, ಅಪನಂಬಿಕೆ ಮತ್ತು ವಿನಾಕಾರಣದ ಸಂಶಯಗಳು ಸಲ್ಲದು.
ಕೆಲವೇ ದಶಕಗಳ ಹಿಂದೆ ಒಂದೊಂದು ಕುಟುಂಬದಲ್ಲೂ ಹತ್ತಿಪ್ಪತ್ತು ಮಕ್ಕಳು ಇದ್ದು ಎಲ್ಲರೂ ಒಟ್ಟಿಗೆ ಊಟ ತಿಂಡಿ, ಆಟ, ಕೆಲಸ ಎಂದು ರಜೆಯ ದಿನಗಳನ್ನು ಕಳೆಯುತ್ತಿದ್ದರು. ಮತ್ತೆ ಮೂರು ದಶಕಗಳ ಹಿಂದೆ ತಿರುಗಿ ನೋಡಿದಾಗ ಐದಾರು ಮಕ್ಕಳಿಂದ ಹತ್ತು ಹನ್ನೆರಡು ಮಕ್ಕಳ ವರೆಗೆ ಸಂಬಂಧಿಗಳ ಎಲ್ಲ ಮಕ್ಕಳು ಒಂದೇ ಮನೆಯಲ್ಲಿ ಜೊತೆಯಾಗಿ ಬಾಳುತ್ತಿದ್ದರು. ಆದರೆ ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿಯ ಜೊತೆ ಇರುವ ಒಂದು ಇಲ್ಲವೇ ಎರಡು ಮಕ್ಕಳಿಗೆ ಆಟವಾಡಲು ಬಿಡಿ.. ಜಗಳವಾಡಲು ಕೂಡ ಯಾರೂ ಸಿಗುತ್ತಿಲ್ಲ.ಅದು ಭಾರತದ ಜನಸಂಖ್ಯೆ ವಿಶ್ವದಲ್ಲಿ ಎರಡನೇ ಸ್ಥಾನ ಗಳಿಸಿರುವಾಗಲೂ ಕೂಡ ನಮ್ಮಲ್ಲಿ ಸಂಬಂಧಗಳು ತಮ್ಮ ಅಂತಸ್ಥತ್ವವನ್ನು ಕಳೆದುಕೊಂಡಿರುವುದು ವಿಪರ್ಯಾಸವಲ್ಲವೇ?

ಮಕ್ಕಳಿಗೆ ಆಟವಾಡಲು, ಭಾವನೆಗಳನ್ನು ಹಂಚಿಕೊಳ್ಳಲು, ಜಗಳವಾಡಲು ಸ್ನೇಹಿತರು ಇಲ್ಲದೆ ಹೋದಾಗ ಅವರಲ್ಲಿ ಉಂಟಾಗುವ ಭಾವನೆಗಳು ಅವರಲ್ಲಿಯೇ ಜಮೆಯಾಗುತ್ತಿದ್ದು ಭಾವನೆಗಳ ವೈಪರೀತ್ಯವು ಅವರಲ್ಲಿ ಇಲ್ಲದ ಒತ್ತಡವನ್ನು ಸೃಷ್ಟಿಸಿ ಆತಂಕ ಖಿನ್ನತೆ ಗೀಳು ರೋಗಗಳಂತಹ ಮಾನಸಿಕ ತೊಂದರೆಗಳಿಗೆ ಈಡು ಮಾಡುತ್ತಿವೆ.
ಈ ಹಿಂದೆ ಮನೆಯ ಕಟ್ಟೆಯ ಮೇಲೆ, ಹಿತ್ತಲಿನ ಒಗೆಯುವ ಕಲ್ಲಿನ ಬಳಿ, ಕೆರೆಯ ದಡದ ಮೇಲೆ, ಬಾವಿಯ ಕಟ್ಟೆಯ ಮೇಲೆ ಹತ್ತು ಹಲವು ಜನರು ಸೇರಿ ಪರಸ್ಪರರ ಸಮಸ್ಯೆಗಳನ್ನು ಹೇಳಿಕೊಂಡು ಅಲ್ಲಿಯೇ ಬಗೆಹರಿಸಿಕೊಂಡು ಊಟ ಮಾಡಿ ಮಲಗಿ ಸೊಂಪಾದ ನಿದ್ರೆ ತೆಗೆಯುತ್ತಿದ್ದರು.
ಈ ರೀತಿಯ ಬಾಂಧವ್ಯ ಇಲ್ಲದ ಇಂದಿನ ಮಕ್ಕಳು ಮಾನಸಿಕ ತೊಂದರೆಗಳಿಗೆ ಈಡಾಗಬಾರದು ಎಂದರೆ
ನಮ್ಮ ವೈಯುಕ್ತಿಕ ಸಂಬಂಧಗಳಲ್ಲಿ ಸೌಹಾರ್ದತೆಯನ್ನು ತರಬೇಕು. ಪರಸ್ಪರ ಅಣ್ಣ ತಮ್ಮಂದಿರು,ಅಕ್ಕ ತಂಗಿಯರಲ್ಲಿ ಒಳ್ಳೆಯ ಒಡನಾಟವನ್ನು ಹೊಂದಿದ್ದು ಆ ಎಲ್ಲರ ಮಕ್ಕಳು ಒಟ್ಟಾಗಿ ಕೂಡು ಕುಟುಂಬದಂತೆ ಬೆಳೆಯಬೇಕು ಹೀಗೆ ಬೆಳೆಯುವ ಮೂಲಕ ಅವರಲ್ಲಿ ಒಳ್ಳೆಯ ಬಾಂಧವ್ಯ ಸೃಷ್ಟಿಯಾಗಬೇಕು.
ಪರಸ್ಪರ ಪ್ರೀತಿ ವಿಶ್ವಾಸ, ನಂಬಿಕೆ ಮತ್ತು ಬಾಂಧವ್ಯಗಳ
ನಂಟಿನ ಗಂಟು ನಮ್ಮಲ್ಲಿ ಸಮೃದ್ಧವಾಗಿರಬೇಕು.


