ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಾರ್ಕಸ್ ಆಂಟ್ಯಾನಿಯೋಸ್ ಅವರು, “ಸಂತೋಷ ಎಂಬುದು ಎಲ್ಲೂ ಇಲ್ಲ. ಅದು ನಮ್ಮ ಒಳ್ಳೆಯ ಆಲೋಚನೆಯ ಮೇಲೆ ನಿಂತಿದೆ” ಎಂದು ಹೇಳಿದ್ದಾರೆ. ಇಂದು ಮಕ್ಕಳ ಮನಸ್ಥಿತಿಯನ್ನು ಅರಿಯುವುದು ಬಹಳ ಕಷ್ಟಕರವಾಗಿದೆ. ಪಾಲಕರು ಮತ್ತು ಪೋಷಕರು ೧೦-೧೫ ವರ್ಷದ ಮಕ್ಕಳಲ್ಲಾಗುವ ದೈಹಿಕ, ಭಾವನಾತ್ಮಕ ಬದಲಾವಣೆಯನ್ನು ತುಂಬಾನೇ ಜಾಗರೂಕತನದಿಂದ ಗಮನಿಸುತ್ತಾ, ವಯಸ್ಸಿಗೆ ಅಗತ್ಯವಿರುವ ಬುದ್ದಿಮಾತುಗಳನ್ನು ಹೇಳುತ್ತಿರಬೇಕು. ಅವರು ಶಾಲೆಯಲ್ಲಿ, ಮನೆಯಲ್ಲಿ ಮತ್ತು ಹೊರಗಡೆ ಹೇಗಿರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಳ್ಳಬೇಕು. ಶಾಲೆಯಿಂದ ಮನೆಗೆ ಬಂದ ನಂತರ ಅವರ ಇಂದಿನ ದಿನಚರಿ, ಶಾಲೆಯಲ್ಲಿನ ಪಾಠ-ಪ್ರವಚನ, ಸಂವಾದ ಮತ್ತು ಅನುಭವಿಸಿದ ಘಳಿಗೆಗಳ ಬಗ್ಗೆ ಆಲಿಸಬೇಕು. ಯಾವುದೇ ಸಮಸ್ಯೆ-ತೊಂದರೆ ಇದ್ದರೆ ಅದರ ಬಗ್ಗೆ ತಿಳಿದುಕೊಳ್ಳಬೇಕು. ಎಂತಹ ಪರಿಸ್ಥಿತಿ ಎದುರಾದರೂ ನಿಮ್ಮ ಜೊತೆ ನಾವಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಬೇಕು. ಪ್ರತಿಯೊಂದು ಸಮಸ್ಯೆಗೆ ಸೂಕ್ತ ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ತಮ್ಮ ಜೀವನದ ಎದುರಾದ ಸಮಸ್ಯೆಗಳ ಬಗ್ಗೆ ನಿದರ್ಶನ ನೀಡುತ್ತಾ, ಸದಾ ಅವರೊಂದಿಗೆ ನಿಲ್ಲುತ್ತೇವೆಂಬ ಭರವಸೆಯನ್ನು ಮನದಲ್ಲಿ ಬಿತ್ತಬೇಕು. ಕೊಂಚ ಎಚ್ಚರ ತಪ್ಪಿದರೂ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಹೆಚ್ಚು. ಮೊನ್ನೆ ಘಾಜಿಯಾಬಾದ್‌ನಲ್ಲಿ ಮೂರು ಸಹೋದರಿಯರು ತೀವ್ರ ಒಂಟಿತನ, ಸಾಮಾಜಿಕ ಸಂಪರ್ಕದ ಕೊರತೆ ಮತ್ತು ಭಾವನಾತ್ಮಕ ಬೆಂಬಲದ ಅಭಾವ ಮತ್ತು ಮಾನಸಿಕ ದುರ್ಬಲತೆಯಿಂದ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಇನ್ನೂ ಮನದಿಂದ ಮಾಸಿ ಹೋಗಿಲ್ಲ. ಈ ದುರಂತ ಪ್ರತಿ ಪೋಷಕ, ಶಿಕ್ಷಕ ಮತ್ತು ಸಮಾಜಕ್ಕೆ ಒಂದು ಗಂಭೀರ ಸ್ವರೂಪದ ಎಚ್ಚರಿಕೆ ಮತ್ತು ಸಂದೇಶವನ್ನು ನೀಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಪೋಷಕರು ಮಕ್ಕಳೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧ ಹೊಂದಲು ಕೆಲವು ಸಲಹೆಗಳು
ಮಕ್ಕಳ ಮಾನಸಿಕ ಬೆಳವಣಿಗೆಯನ್ನು ಅಗಾಗ್ಗೆ ಗಮನಿಸುತ್ತಿರಬೇಕು
ಕೇವಲ ಪರೀಕ್ಷೆಯಲ್ಲಿ ಅಂಕಗಳನ್ನು ಪಡೆಯುವುದು ಅಥವಾ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಅಷ್ಟೇ ಅಲ್ಲ. ವಿದ್ಯಾರ್ಥಿಗಳ ಅಥವಾ ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಆಲೋಚನೆಯು ಶೈಕ್ಷಣಿಕ ಜ್ಞಾನದಷ್ಟೇ ಅವಶ್ಯಕವಾಗಿದೆ. ಭಾವನಾತ್ಮಕ ಬುದ್ದಿಮತ್ತೆಯಿಂದ ಪೋಷಕರು ತಮ್ಮ ಭಾವನೆಗಳನ್ನು ನಿಯಂತ್ರಿಸುವುದರ ಜತೆಗೆ ಮಕ್ಕಳ ಭಾವನೆಯನ್ನು ನಿರ್ವಹಿಸುವ, ಸಕಾರಾತ್ಮಕ ಸಂಬಂಧಗಳನ್ನು ಬೆಳೆಸುವ ಮತ್ತು ಸಮಸ್ಯೆ ಎದುರಿಸುತ್ತಿದ್ದಾಗ ಅಥವಾ ಕಠಿಣ ಪರಿಸ್ಥಿತಿ ಸಂದರ್ಭಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬಹುದು.
ಮಕ್ಕಳಲ್ಲಿ ಸ್ವಯಂ ಅರಿವು ಮೂಡಿಸುವುದು ಅಗತ್ಯ
ಮಕ್ಕಳು ಅಥವಾ ವಿದ್ಯಾರ್ಥಿಗಳು ಹಜ್ಜೆ ಹೆಜ್ಜೆಗೂ ಅನುಭವಿಸುವ ಮನಸ್ಥಿತಿಯನ್ನು ಗುರುತಿಸಿ, ಪರಿಣಾಮಕಾರಿ ಭಾವನಾತ್ಮಕ ಬುದ್ದಿಮತ್ತೆಯ ತಂತ್ರದಿಂದ ಯೋಗ, ವ್ಯಾಯಾಮ, ದೈಹಿಕ ಕಸರತ್ತು ಮತ್ತು ಏಕಾಗ್ರತೆಗಳಿಂದ ಮನಸ್ಸಿನ ಶಾಂತಿಯನ್ನು ಸ್ಥಿಮಿತಗೊಳಿಸಲು ಸಹಾಯಕಾರಿ. ಯಾವುದೇ ಸಮಸ್ಯೆ ತಲೆದೋರಿದಾಗ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕದೇ ದೃಢ ಆಲೋಚನೆಯಿಂದ ಸಮಸ್ಯೆಯನ್ನು ಎದುರಿಸುವ ಶಕ್ತಿಯ ಬಗ್ಗೆ ಅರಿವು ಮೂಡಿಸುವುದು. ಅವರು ಸ್ವಯಂ ಆಗಿ ತಮ್ಮ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ತುಂಬಾನೇ ಮುಖ್ಯ.
ಪೋಷಕರು ಮಕ್ಕಳ ಸ್ನೇಹಿತರಂತಿರಬೇಕು

ಪಾಲಕರು ಅಥವಾ ಪೋಷಕರು ಸದಾ ಮಕ್ಕಳ ಜೊತೆ ಅತಿಯಾಗಿ ಕಟ್ಟುನಿಟ್ಟಾಗಿರಬಾರದು. ಮಕ್ಕಳ ಜೊತೆಗೆ ಸ್ನೇಹಿರಂತೆ ವರ್ತಿಸಬೇಕು. ಅತಿಯಾದ ಶಿಸ್ತು ಕಲಿಸಲು ಹೋದರೆ ಅನಾಹುತಗಳೇ ಸಂಭವಿಸುತ್ತವೆ ಎನ್ನುವುದು ಪಾಲಕರಿಗೆ ತಿಳಿದಿರಬೇಕು. ಮಕ್ಕಳು ತಪ್ಪು ಮಾಡುವುದು ಸಹಜ. ತಪ್ಪಿದಾಗ ತಲೆ ಮೇಲೆ ಕೈ ಸವರಿ ಅದೇ ಕೆಲಸವನ್ನು ಹೀಗೆ ಮಾಡಬಹುದಿತ್ತಲ್ಲ ಎಂಬ ಆತ್ಮಸಮಾಲೋಚನೆ ರೂಪದ ಸಲಹೆ ನೀಡವಂತಿರಬೇಕು. ಮಕ್ಕಳೊಂದಿಗೆ ಮನೆಯಂಗಳದಲ್ಲಿ ಆಟವಾಡುವ ಮತ್ತು ಕ್ರೀಡಾಸಕ್ತಿ ಬೆಳಸುವ ಜತೆಗೆ ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಪೂರಕ ಪರಿಸರ ನಿರ್ಮಿಸಬೇಕು. ಮಗು ತನ್ನ ಮನದಾಳದ ಮಾತು ಅಥವಾ ಮನದಿಂಗಿತ ಅಥವಾ ಭಾವನೆಗಳನ್ನು ಹಂಚಿಕೊಳ್ಳಲು ಉತ್ತಮ ಸ್ನೇಹಿತನಾಗಲು ಪ್ರಯತ್ನಿಸಬೇಕು.
ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸಬೇಕು
ಮಗು ಸುರಕ್ಷಿತ ವಾತಾವರಣದಲ್ಲಿ ಕಲಿಕೆಯನ್ನು ಮಾಡುವಂತಿದ್ದರೆ, ಮಕ್ಕಳು-ಶಿಕ್ಷಕ ಮತ್ತು ಪೋಷಕರ ನಡುವಿನ ಭಾವನಾತ್ಮಕ ಬಂಧವು ಗಟ್ಟಿಗೊಳಿಸುತ್ತದೆ. ಪೋಷಕರು ತಮ್ಮ ಮಗು ಮುಕ್ತವಾಗಿ ಮಾತನಾಡಲು, ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸುತ್ತಾ, ನೀವು ಅವರನ್ನು ಹೆದರಿಸುವುದನ್ನು ಮತ್ತು ಬೆದರಿಸುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಮಕ್ಕಳು ನಮ್ಮ ಬಳಿಗೆ ಬಂದು ತಮ್ಮ ಬಾಲ್ಯದಲ್ಲಿ ತಲೆದೋರಿದ ಸಮಸ್ಯೆಗಳ ಬಗ್ಗೆ ಬಿಚ್ಚಿಡುತ್ತಾರೆ.
ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಿಗಾ ವಹಿಸಬೇಕು
ಮಕ್ಕಳ ಮನೋಭಾವ ಅಥವಾ ಮನೋಧೋರಣೆಯನ್ನು ಮುಖ್ಯವಾಗಿ ಅವರ ಬಾವನೆ, ನಡುವಳಿಕೆ. ಆಲೋಚನೆ ಮತ್ತು ಸಂಬಂಧಗಳ ಮೇಲೆ ಅವಲಂಬಿಸಿರುತ್ತದೆ. ಮಕ್ಕಳ ಭಾವನೆ, ಖಿನ್ನತೆ, ಗಮನದ ಕೊರತೆ, ವರ್ತನೆಯ ಅಸ್ವಸ್ಥತೆಗಳು, ನಡುಳಿಕೆಯಲ್ಲಿ ಬದಲಾವಣೆ, ಒಂಟಿತನ, ಅಟೋಟಗಳಲ್ಲಿ ನಿರಾಸಕ್ತಿ, ನಿದ್ರಾಭಂಗ ಮತ್ತು ದೈಹಿಕ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ಗುರುತಿಸಿ, ಅಗತ್ಯವೆನಿಸಿದರೆ, ವೈದ್ಯರು ಅಥವಾ ಆಪ್ತಸಮಾಲೋಚಕರ ಬಳಿ ಅವಶ್ಯಕ ಸಲಹೆ ಪಡೆಯಬೇಕು.
ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು
ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾನಸಿಕ ತಜ್ಞರ ಸಲಹೆಯಂತೆ, ಪೋಷಕರು ಮಕ್ಕಳನ್ನು ಕಿಂಚಿತ್ತೂ ನಿರ್ಲಕ್ಷಿಸಬಾರದು. ಮಕ್ಕಳು ಯಾವುದೇ ವಿಷಯದ ಬಗ್ಗೆ ಹೇಳಲು ಬಂದಾಗ ತಾಳ್ಮೆಯಿಂದ ಆಲಿಸುವಂತಾಗಬೇಕು. ಅವರ ಮನದ ಭಾವನೆಗಳನ್ನು ಕೇಳಬೇಕು. ಮೋಬೈಲ್ ಫೋಬಿಯಾ ದೂರಾಗಿಸಲು ಪ್ರಯತ್ನಿಸದೇ ಸಾಧ್ಯವಾದ ಮಟ್ಟಿಗೆ ಮೊದಲು ನಾವು ಮಕ್ಕಳ ಮುಂದೆ ಮೋಬೈಲ್ ಬಳಸುವದನ್ನು ನಿಲ್ಲಿಸಬೇಕು. ಅಂದಾಗ ಮಾತ್ರ ಅವರು ನಮ್ಮನ್ನು ಅನುಕರಣೆ ಮಾಡುತ್ತಾರೆ ಹೊರತು ಹೇಳಿದ ಪಾಠದಿಂದಲ್ಲ ಎಂಬ ಸೂಕ್ಷ್ಮವನ್ನು ಅರಿಯಬೇಕು. ಸದಾ ಮಕ್ಕಳ ಜತೆಗೆ ನಾವಿದ್ದೇವೆ ಎಂಬ ದೃಢವಾದ ಭಾವನಾತ್ಮಕ ಬೆಂಬಲವನ್ನು ನೀಡಬೇಕು.
ಕೊನೆಯ ನುಡಿ
ಮಕ್ಕಳ ಮಾನಸಿಕ ಆರೋಗ್ಯ ಮತ್ತು ಡಿಜಿಟಲ್ ಬದುಕಿನ ಮಧ್ಯೆ ಅತೀ ನಾಜೂಕಾದ ಅಥವಾ ಸಂವೇದನಾಶೀಲತೆಯಿಂದ ಸಂಬಂಧದ ಬಗ್ಗೆ ಇಡೀ ಸಮಾಜ ಇಂದು ಗಂಭೀರವಾಗಿ ಯೋಚಿಸಬೇಕಾಗಿದೆ. ಮೋಬೈಲ್ ಎಂಬ ಮಾಯಾವಿ ಕಾರಣದಿಂದ ಪೋಷಕರು ಮತ್ತು ಮಕ್ಕಳ ಸಂಬಂಧಗಳಲ್ಲಿ ಕುಸಿತ ಕಾಣುತ್ತಿದೆ. ಮಕ್ಕಳು ಮನರಂಜನೆ, ರೀಲ್ಸ್, ಗೇಮ್ಸ್, ಸಾಮಾಜಿಕ ಮಾಧ್ಯಮಗಳ ಕಂಟೆಂಟಗಳನ್ನು ನೋಡುವುದು ಮತ್ತು ಅವುಗಳ ಮೇಲೆ ಅತಿಯಾದ ಆಸಕ್ತಿ ಹೊಂದಿರುವುದೇ ಇದಕ್ಕೆ ಕಾರಣ. ಆದ್ದರಿಂದ ಸ್ಮಾರ್ಟಫೋನ್ ಅತಿಯಾದ ಬಳಕೆ ಮತ್ತು ಅದು ಸೃಷ್ಟಿಸುವ ಕಾಲ್ಪನಿಕ ಜಗತ್ತಿನ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿಕೊಟಬೇಕು. ಮನೆಯಲ್ಲಿ ಮಕ್ಕಳ ಕಥೆ, ಚಂದಮಾಮಾ ಮತ್ತು ಇನ್ನಿತರ ಮಕ್ಕಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು.


