ವಿಶ್ವ ಹೃದಯ ದಿನಾಚರಣೆ ಮತ್ತು ವಿಶ್ವ ರೇಬಿಸ್ ದಿನಾಚರಣೆ ಜನಜಾಗೃತಿ ಜಾಥಾಕ್ಕೆ ಚಾಲನೆ
ವಿಜಯಪುರ: ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ವಿಶ್ವಾದ್ಯಂತ ಪ್ರತಿ ವರ್ಷ ೧೭.೩ ಮಿಲಿಯನ್ ಜನರು ಸಾವಿಗಿಡಾಗುತ್ತಿದ್ದಾರೆ. ನಿಯಮಿತ ಯೋಗಾಭ್ಯಾಸ ಅಳವಡಿಸಿಕೊಂಡು ನಿತ್ಯವೂ ಹೃದಯದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ ಎನ್.ಸಿ.ಡಿ.ಘಟಕ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ ಡಾ|| ಬಿದರಿಯವರ ಅಶ್ವಿನಿ ಆಸ್ಪತ್ರೆ ಹಾಗೂ ಅಶ್ವಿನಿ ಇನ್ಸಿಟ್ಯೂಟ್ ವಿವಿದ ನರ್ಸಿಂಗ್ ಕಾಲೇಜಗಳು ಇವರ ಸಹಯೋಗದಲ್ಲಿ ಸೆ.೩೦ರ ಶನಿವಾರ ಆಯೋಜಿಸಲಾದ ವಿಶ್ವ ಹೃದಯ ದಿನಾಚರಣೆ ಮತ್ತು ವಿಶ್ವ ರೇಬಿಸ್ ದಿನಾಚರಣೆ ಜನಜಾಗೃತಿ ಜಾಥಾಕ್ಕೆ ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಚಿಕ್ಕಮಕ್ಕಳ ತಜ್ಞ ಡಾ|| ಎಲ್.ಎಚ್ ಬಿದರಿಯವರೊಂದಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಾದ್ಯಂತ ಹೆಚ್ಚು ಮನುಷ್ಯ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಹೃದಯ ಸಂಬಂಧಿ ಕಾಯಿಲೆಗಳು ಈ ಕಾಯಿಲೆಗಳಿಂದಾಗಿ ವಿಶ್ವಾದ್ಯಂತ ಪ್ರತಿ ವರ್ಷ ೧೭.೩ ಮಿಲಿಯನ್ ಜನರು ಸಾವಿಗಿಡಾಗುತ್ತಿದ್ದಾರೆ . ದಿನನಿತ್ಯ ಕನಿಷ್ಠ ೩೦ ನಿಮಿಷ ಬಿರುಸಿನ ನಡಿಗೆ, ವಯಸ್ಸಿಗನುಗುಣವಾಗಿ ವ್ಯಾಯಾಮ ದಿನಾಲೂ ೨೦ ನಿಮಿಷ ನೀರಿನಲ್ಲಿ ಈಜಾಡುವುದು, ಸೇರಿದಂತೆ ನಿಯಮಿತ ಯೋಗಾಭ್ಯಾಸ ಶರೀರಕ್ಕೆ ಹಾಗೂ ಹೃದಯಕ್ಕೆ ಉತ್ತಮವಾಗಿದ್ದು, . ನಿಯಮಿತ ಧ್ಯಾನದಿಂದ ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ತಡೆಗಟ್ಟುಬಹುದು ಎಂದು ಹೇಳಿದರು.
ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಚಿಕ್ಕಮಕ್ಕಳ ತಜ್ಞ ಡಾ|| ಎಲ್.ಎಚ್ ಬಿದರಿ ಅವರು ಮಾತನಾಡಿ, ಧೂಮಪಾನದಿಂದ ರಕ್ತದಲ್ಲಿ ಕೊಬ್ಬಿನಾಂಶ ಹೆಪ್ಪುಗಟ್ಟಿ ರಕ್ತನಾಳಗಳನ್ನು ಕುಗ್ಗಿಸುತ್ತದೆ, ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮದಿಂದ ಹೃದಯಾಘಾತವನ್ನು ತಡೆಗಟ್ಟಿಬಹುದು, ಒಂದು ವೇಳೆ ಹೃದಯಾಘಾತವಾದರೂ ಬದುಕುಳಿಯುವ ಸಾಧ್ಯತೆ ಹೆಚ್ಚು-ಕಾಫಿ, ಚಹಾ ಸೇವನೆ ಮಿತವಾಗಿರಲಿ. ಸಕ್ಕರೆ ಕಾಯಿಲೆ (ಮಧುಮೇಹ)ಯಿಂದ ಹೃದಯಾಘಾತವಾಗುವ ಸಂಭವ ಹೆಚ್ಚಾಗಿರುವುದರಿಂದ ಸಕ್ಕರೆ ಕಾಯಿಲೆಯವರು ಸರಿಯಾದ ಚಿಕಿತ್ಸೆಯನ್ನು ಪಡೆಯಬೇಕು. ರಕ್ತದಲ್ಲಿನ ಕೊಬ್ಬಿನಾಂಶ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಮ್ಮ ತೂಕ ಹಾಗೂ ಆಹಾರಕ್ರಮದ ಬಗ್ಗೆ ಕಾಳಜಿವಹಿಸಿದರೆ ಹೃದಯಾಘಾತವನ್ನು ತಪ್ಪಿಸಬಹುದೆಂದು ಹೇಳಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ: ಕವಿತಾ ದೊಡ್ಡಮನಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ: ಜೈಬುನಿಸಾ ಬಿಳಗಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ|| ಸಂಪತ ಗುಣಾರಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಕೆ.ಡಿ.ಗುಂಡಬಾವಡಿ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ಪರಸುರಾಮ ಹಿಟ್ಟನಳ್ಳಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಜಿ. ಮುರನಾಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಎಮ್.ಕೊಲೂರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್ ಆರ್ ಬಾಗವಾನ ಅಶ್ವಿನಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ, ಜಿಲ್ಲಾ ಎನ್.ಸಿ.ಡಿ ಘಟಕದ ಸಿಬ್ಬಂದಿ, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು-ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.