ಕಾಂಗ್ರೆಸ್‌ನಲ್ಲಿ ಲಿಂಗಾಯತರ ಕಡೆಗಣನೆ?
ಮತ್ತೆ ಚಿಗುರೊಡೆದ ಲಿಂಗಾಯತ ಸಿಎಂ ಕೂಗು | ಪ್ರಮುಖ ಹುದ್ದೆಗಳಲ್ಲೂ ಮೂಲೆಗುಂಪು | ತಾರತಮ್ಯ ನೀತಿ
ದಾವಣಗೆರೆ: ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಿಎಂ ಕೂಗು ಮತ್ತೆ ಚಿಗುರೊಡೆದಿದೆ. ಜೊತೆಗೆ ಪ್ರಮುಖ ಹುದ್ದೆಗಳನ್ನು ನೀಡುವ ವಿಚಾರದಲ್ಲೂ ಲಿಂಗಾಯತರನ್ನು ಕಡೆಗಣಿಸುತ್ತಿರುವ ಆರೋಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಳಿ ಬಂದಿದೆ.
ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂದು ದೂರಲಾಗುತ್ತಿದೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೇರವಾಗಿಯೇ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ನೀಡುತ್ತಿಲ್ಲ. ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡರು.
ಜೊತೆಗೆ ಅವರು ಲಿಂಗಾಯತ ಸಿಎಂ ಪರ ಧ್ವನಿಯನ್ನು ಕೂಡ ಎತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ಕಾರದ ಆಯಕಟ್ಟಿನ ಹುದ್ದೆಗಳು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ. ಈ ಹಿಂದೆ ಎಲ್ಲರೂ ಚೆನ್ನಾಗಿದ್ದರು. ನಿಜಲಿಂಗಪ್ಪ, ಜೆ.ಎಚ್.ಪಾಟೀಲರು ಇದ್ದಾಗ ಎಲ್ಲರೂ ಚೆನ್ನಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ. ಡಿಸಿಎಂ ತೆಗೆದುಕೊಂಡು ಏನು ಮಾಡಬೇಕು. ಆದರೆ ಸಿಎಂ ಆಗಬೇಕು. ಯಾವಾಗಲೂ ಸಿಎಂ ಹುದ್ದೆಗೆ ನಮ್ಮ ಪ್ರಸ್ತಾಪ ಇದ್ದೇ ಇರುತ್ತದೆ ಎಂದು ಹೇಳಿದರು. ಲಿಂಗಾಯತ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಬೇಕು ಎಂಬ ಮಾತು ಕಾಂಗ್ರೆಸ್ ನಾಯಕರಿಂದಲೇ ಈ ಹಿಂದೆ ಕೇಳಿ ಬಂದಿತ್ತು. ಈಗ ಡಿಸಿಎಂ ಆಗಿ ಏನು ಮಾಡಬೇಕು. ಆದರೆ ಸಿಎಂ ಆಗಬೇಕು ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಪರ ಧ್ವನಿ ಎತ್ತಿದ್ದಾರೆ.
ಕಾಂಗ್ರೆಸ್ ನ್ನುಇಕ್ಕಟ್ಟಿಗೆ ಸಿಲುಕಿಸಿದ ಹೇಳಿಕೆ
ಲಿಂಗಾಯತ ಸಮುದಾಯದ 92 ವರ್ಷ ವಯಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬೇಡಿಕೆಯು ದಾವಣಗೆರೆ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಡೆ ವಾಲಿತ್ತು. ಚುನಾವಣೆಯಲ್ಲಿ 46 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 37 ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ 69 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಆದರೆ 15 ಮಂದಿ ಮಾತ್ರ ಗೆದ್ದಿದ್ದಾರೆ.
ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.