ಇಂಡಿ: ಶೈಕ್ಷಣಿಕ ಪರಿಸರವಿಲ್ಲದ ಅಥರ್ಗಾ ಗ್ರಾಮಕ್ಕೆ 1909 ರಲ್ಲಿ ಶಿಕ್ಷಕರಾಗಿ ಬಂದ ರೇವಣಸಿದ್ದರು ಇಡೀ ಗ್ರಾಮದಲ್ಲಿ ಕಲಿಕಾ ವಾತಾವರಣ ಹುಟ್ಟಿಸಿ,ದೈವಿ ಸ್ವರೂಪಿ ಶಿಕ್ಷಕರಾಗಿ, ಶಿಕ್ಷಕ ವೃತ್ತಿಯನ್ನು ದೈವತ್ವಕ್ಕೆ ಏರಿಸಿ ದೇವರಾಗಿ ಪೂಜಿಸಲ್ಪಡುತ್ತಿದ್ದಾರೆ ಎಂಬುದು ಈ ನೆಲದ ಶ್ರೇಷ್ಠತೆಯಾಗಿದೆ ಎಂದು ಸಾಹಿತಿ ಚಿದಂಬರ ಬಂಡಗರ ಹೇಳಿದರು.
ಅವರು ಇಂಡಿಯ ಭೀಮಾಂತರಂಗ ಜಗಲಿ, ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-2 ರಲ್ಲಿ ಅಥರ್ಗಾದ ಗುರು ರೇವಣಸಿದ್ದರ ಕುರಿತು ಉಪನ್ಯಾಸ ನೀಡುತ್ತಾ ಈ ಮಾತುಗಳನ್ನು ಹೇಳಿದರು.
ಸ್ವಯಂ ಪ್ರೇರಣೆಯಿಂದ ಅಥರ್ಗಾ ಗ್ರಾಮದ ಉದ್ಧಾರಕ್ಕೆ ಕಾಯಾ ವಾಚಾ ಮನಸಾ ಶ್ರಮಿಸಿದ ರೇವಣಸಿದ್ದರು ಮಕ್ಕಳನ್ನು, ಅನಕ್ಷರಸ್ಥರನ್ನು ಸಂಸ್ಕಾರಯುತ
ಶಿಕ್ಷಣವಂತರನ್ನಾಗಿ ಮಾಡಿದ ಶ್ರೇಯಸ್ಸು ಇವರದು. ಗ್ರಾಮದಲ್ಲಿ ವಾಚನಾಲಯ ಆರಂಭಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿದ ಇವರು ತಮ್ಮ ಸಂಬಳದಲ್ಲಿಯೇ ಪುಸ್ತಕ ಖರೀದಿಸಿ ಕೊಟ್ಟವರು ಎಂದು ಹೇಳಿದರು.
ಪ್ರತಿದಿನ ನಸುಕಿನಲ್ಲಿ ಮಕ್ಕಳ ಮನೆ ಮನೆಗೆ ಹೋಗಿ,ಅವರನ್ನು ಎಬ್ಬಿಸಿ ಓದಿನಲ್ಲಿ ತೊಡಗುವಂತೆ ಮಾಡಿ,ದಕ್ಷ, ಪ್ರಾಮಾಣಿಕ ವಿದ್ಯಾರ್ಥಿಗಳನ್ನು ರೂಪಿಸಿದ ಉದ್ದಾರ ಪುರುಷ ರೇವಣಸಿದ್ದರು ಗ್ರಾಮದ ಜನತೆಯ ಒಡನಾಡಿಯಾಗಿ ಎಲ್ಲ ರೀತಿಯ ವ್ಯಾಜ್ಯಗಳನ್ನು ಪರಿಹರಿಸಿ ಮಾಸ್ಟರ್ ಬಿಕಮ್ ಮ್ಯಾಜಿಸ್ಟ್ರೇಟ್ ಆಗಿ ದೈವಿ ಪುರುಷರೆನಿಸಿಕೊಂಡರು.ಯೋಗ ಆರಾಧಕ, ಭಜನಾಕಾರರಾಗಿದ್ದು,ಊರಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗಮಾಡಿ ತಮ್ಮ ೩೬ ನೆಯ ವಯಸ್ಸಿಗೆ ದೈವಾದೀನರಾಗಿದ್ದಾರೆ ಎಂದು ಹೇಳಿದರು.
ಇಂಡಿ ಸಂಶೋಧಕ ಡಿ.ಎನ್.ಅಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಕಾಕ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ,ಡಾ ಚನ್ನಪ್ಪ ಕಟ್ಟಿ,ಮಹಾದೇವಪ್ಪ ಪಡಶೆಟ್ಟಿ, ರಾಘವೇಂದ್ರ ಕುಲಕರ್ಣಿ, ಗೀತಯೋಗಿ, ಬಸವರಾಜ ಕಿರಣಗಿ, ರಾಚು ಕೊಪ್ಪ, ಸಂಗನಗೌಡ ಹಚಡದ, ಮೊಯಿನ್ ಮುಲ್ಲಾ, ಮನು ಪತ್ತಾರ, ಪ್ರಕಾಶರಾವ್ ಬೋಂಡಾರ್ದೆ,
ಸುಶೀಲಾ ಯರಗಟ್ಟಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಶಿಕ್ಷಕಿ ಸರೋಜಿನಿ ಮಾವಿನಮರ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕ ಸಂತೋಷ ಬಂಡೆ ನಿರೂಪಿಸಿದರು. ಸಿ ಆರ್ ಪಿ ಶ್ರೀಧರ ಹಿಪ್ಪರಗಿ ವಂದಿಸಿದರು.
Related Posts
Add A Comment