ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯಕೆಗೆ ಕೇಂದ್ರ ಸರಕಾರಕ್ಕೆ ಮರು ಮೇಲ್ಮನವಿ ಸಲ್ಲಿಸಿ | ಮಹಿಳಾ ವಿವಿದಲ್ಲಿ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿ ಸ್ಥಾಪಿಸಿ | ಡಾ.ಶಶಿಕಾಂತ ಪಟ್ಟಣ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನ್ಯಾಯಮೂರ್ತಿ ನಾಗಮೋಹನದಾಸ ವರದಿಯಾಧಾರಿತ ಹಿಂದಿನ ಸರಕಾರದ ಶಿಫಾರಸ್ಸನ್ನು ಸದೃಢಗೊಳಿಸಿ ಲಿಂಗಾಯತ ಧರ್ಮಿಯರನ್ನು ಅಲ್ಪ ಸಂಖ್ಯಾತ ಎಂದು ಪರಿಗಣಿಸಲು ಮತ್ತೆ ಕೇಂದ್ರ ಸರಕಾರಕ್ಕೆ ಮರು ಮೇಲ್ಮನವಿಯನ್ನು ಸಲ್ಲಿಸಿ ಲಿಂಗಾಯತರಿಗೆ ನ್ಯಾಯ ಒದಗಿಸಬೇಕೆಂದು ಪುಣೆ-ವಿಜಯಪುರದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದ್ದಾರೆ
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯತರನ್ನು 2 D ಅಲ್ಪ ಸಂಖ್ಯಾತ ಸ್ಥಾನಮಾನದ ಮಾನ್ಯತೆ ನೀಡಲು ಕಾನೂನಿನಲ್ಲಿ ಅವಕಾಶವಿದ್ದು ಈ ಕೂಡಲೇ ಲಿಂಗಾಯತ ಧರ್ಮಿಯರನ್ನು ಅಲ್ಪ ಸಂಖ್ಯಾತ ಎಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕದ ಏಕಮೇವ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿ ಹೆಚ್ಚಿನ ಆರ್ಥಿಕ ಅನುದಾನ ನೀಡಿ ಶರಣ ಸಾಹಿತ್ಯದ ಸಂಶೋಧನೆ ಪರಿಷ್ಕರಣೆ ಪ್ರಕಟಣೆಗೆ ತ್ವರಿತವಾಗಿ ಕಾರ್ಯ ರೂಪಿಸಬೇಕೆಂದು ಪಟ್ಟಣ ಆಗ್ರಹಿಸಿದರು.
ಕರ್ನಾಟಕದ ಏಕಮೇವ ಮಹಿಳಾ ವಿಶ್ವವಿದ್ಯಾಲಯದಲ್ಲಿ ವೀರಾಗಿಣಿ ಅಕ್ಕಮಹಾದೇವಿಯವರ ಅರೆಬೆತ್ತಲೆ ಪುತ್ಥಳಿಯನ್ನು ಈ ಕೂಡಲೇ ತೆರುವುಗೊಳಿಸಿ ಆ ಸ್ಥಳದಲ್ಲಿ ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿಯನ್ನು ನಿಲ್ಲಿಸಲು ಡಾ.ಪಟ್ಟಣ ಆಗ್ರಹಿಸಿದರು.
ಸನ್ಮಾನ್ಯ ಮುಖ್ಯ ಮಂತ್ರಿಗಳೇ ನಮ್ಮ ಮೇಲಿನ ಎಲ್ಲಾ ಬೇಡಿಕೆಗಳು ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿದ್ದು ಈ ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಬಸವ ಭಕ್ತರು ತಮ್ಮನ್ನು ಆಗ್ರಹಿಸುತ್ತೇವೆ.
ಒಂದು ವೇಳೆ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಬಸವ ಭಕ್ತರು ಬೀದಿಗಿಳಿದು ಉಗ್ರ ಪ್ರತಿಭಟನೆ ಮತ್ತು ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಡಾ.ಪಟ್ಟಣ ಎಚ್ಚರಿಸಿದರು.
ಡಾ.ಸರಸ್ವತಿ ಪಾಟೀಲ್, ರತ್ನಾಬಾಯಿ ಬಿರಾದಾರ, ವಿ.ಸಿ.ನಾಗಠಾಣ, ಜಂಬುನಾಥ ಕಂಚಾಣಿ, ಸಿದ್ದಪ್ಪ ಪಡನಾಡ, ಬಸಮ್ಮ ಭರಮಶೆಟ್ಟಿ, ಡಾ.ಶಾರದಾಮಣಿ ಹುನಶಾಳ, ಪ್ರೊ ಆರ್ ಎಸ್ ಬಿರಾದಾರ ಸೇರಿದಂತೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ,
ನೀಲಮ್ಮನ ಬಳಗ, ಶರಣ ಸಾಹಿತ್ಯ ಪರಿಷತ್ತು, ಮತ್ತು ಇತರ ಬಸವಪರ ಸಂಘಟನೆಗಳ ಬಸವ ಭಕ್ತರು ಇದ್ದರು.

ಇಂದು ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಕೆ
ಪುಣೆ-ವಿಜಯಪುರದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಬಸವ ವೇದಿಕೆ ನೀಲಮ್ಮನ ಬಳಗ ಮತ್ತು ವಿಜಯಪುರ ಜಿಲ್ಲೆಯ ಅನೇಕ ಬಸವ ಪರ ಸಂಘಟನೆಗಳಿಂದ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಜು.23 ರಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವುದಾಗಿ ಡಾ.ಶಶಿಕಾಂತ ಪಟ್ಟಣ ತಿಳಿಸಿದರು.

ಬಸವಣ್ಣ ಸಾಂಸ್ಕೃತಿಕ ನಾಯಕ: ಕೇವಲ ಘೋಷಣೆಯಾಗದಿರಲಿ
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2013 ರಲ್ಲಿ ಬಸವ ಜಯಂತಿಯಂದೇ ಪ್ರಮಾಣ ವಚನವನ್ನು ಸ್ವೀಕರಿಸಿ 2024 ರಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅತ್ಯಂತ ಶ್ಲಾಘನಿಯ ವಿಷಯವಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎನ್ನುವುದು ಕೇವಲ ಘೋಷಣೆಯಾಗಿ ಉಳಿಯದೆ ಅದು ಕಾರ್ಯರೂಪದಲ್ಲಿ ತರಬೇಕೆಂದು ಡಾ.ಶಶಿಕಾಂತ ಪಟ್ಟಣ ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ.
ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರಿಡಿ
ಜಗತ್ತಿನ ಬಹು ದೊಡ್ಡ ದಾರ್ಶನಿಕ ಸಮಾಜ ಸುಧಾರಕ ಲಿಂಗಾಯತ ಧರ್ಮದ ಸಂಸ್ಥಾಪಕ ಜಗಜ್ಯೋತಿ ಬಸವಣ್ಣನವರು ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ್ದರೂ ಸಹಿತ ವಿಜಯಪುರ ಜಿಲ್ಲೆಯ ಬಹುತೇಕ ಶರಣರ ಸ್ಮಾರಕಗಳು ನಿರ್ಲಕ್ಷಕ್ಕೆ ಒಳಪಟ್ಟಿವೆ ಅವುಗಳ ರಕ್ಷಣೆಗೆ ಸರಕಾರ ಮುಂದಾಗಬೇಕು, ಶರಣರ ಸ್ಮಾರಕಗಳ ಮುಂದೆ ಕರ್ನಾಟಕದ ಪುರಾತತ್ವ ಇಲಾಖೆ ಸಂಸ್ಥೆಯಿಂದ ಶರಣರ ಹೆಸರು ಒಟ್ಟು ವಚನಗಳು ಮತ್ತು ಜೀವನದ ಸಂಕ್ಷಿಪ್ತ ವಿವರವುಳ್ಳ ಫಲಕವನ್ನು ನಿಲ್ಲಿಸಬೇಕು. ಇದಕ್ಕಾಗಿ ಶರಣರ ಸ್ಮಾರಕಗಳ ಪ್ರಾಧಿಕಾರವನ್ನು ನಿರ್ಮಿಸಬೇಕು. ವಿಜಯಪುರದ ಕೇಂದ್ರ ಬಸ್ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಬಸ್ ನಿಲ್ದಾಣವೆಂದು ನಾಮಕರಣ ಮಾಡಬೇಕು. ನಗರದ ಪ್ರಮುಖ ಬೀದಿಗಳಿಗೆ ಮತ್ತು ಸರ್ಕಲ್ ಗಳಿಗೆ ಜಿಲ್ಲೆಯ ಶರಣರಾದ ಹಡಪದ ಅಪ್ಪಣ್ಣ ಅಕ್ಕ ನಾಗಮ್ಮ, ನುಲಿಯ ಚಂದಯ್ಯ ಹಾವಿನಾಳ ಕಲ್ಲಯ್ಯ, ಚೆನ್ನ ಬಸವಣ್ಣ,ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣ, ಕುರುಬ ಗೊಲ್ಲಾಳ, ಹಡಪದ ಲಿಂಗಮ್ಮ, ಬಾಹೂರು ಬೊಮ್ಮಯ್ಯ ಮುಂತಾದ ಶರಣರ ಹೆಸರನ್ನು ಇಡಬೇಕು ಎಂದು ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದರು.