ಲೇಖನ
– ಅರವಿಂದ ಜಿ. ಜೋಷಿ
ಮೈಸೂರು
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಹುಟ್ಟುವಾಗಲೇ ಅಂಗವಿಕಲತೆ ಯಾಗಿದ್ದ ಅರುಣಾ,ಹೆತ್ತ ತಾಯಿ ಹೊರತುಪಡಿಸಿ
ಉಳಿದವರ ದೃಷ್ಟಿಯಲ್ಲಿ ಬೇಡದ ವಸ್ತುವಿನಂತಾಗಿದ್ದಳು. ಸಾಮಾನ್ಯವಾಗಿ ಸೃಷ್ಟಿಕರ್ತ ತಾನೇನಾದರೂ ಕೊಡುವ ಸಮಯದಲ್ಲಿ ಮರೆತಿದ್ದರೆ ಪುನಃ ಯೋಚಿಸಿ ಅಂತಹವರಿಗೆ ಬೇರೆ ರೂಪದಲ್ಲಿ ಎರಡರಷ್ಟನ್ನು ಕರುಣಿಸುತ್ತಾನೆ ಎಂಬ ಮಾತಿಗೆ ಪೂರಕವಾಗುವಂತೆ ಅರುಣಾಳಿಗೆ ಅಸಾಧ್ಯ ಚುರುಕು ಬುದ್ಧಿ ನೀಡಿದ್ದ.
ಅರುಣಾ ಬೆಳೆಯುತ್ತಿದ್ದಂತೆ ಗಣೀತ ವಿಷಯದಲ್ಲಿ ಅಪಾರ ಆಸಕ್ತಿ ತೋರಿಸುತ್ತ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ,ಜನ ಯಾವುದನ್ನು ಕಬ್ಬಿಣದ ಕಡಲೆ ಎನ್ನುತ್ತಿದ್ದರೋ ಆ ವಿಷಯವನ್ನು ನೀರು ಕುಡಿದಷ್ಟು ಸಲೀಸಾಗಿ ತಿಳಿದುಕೊಂಡಿದ್ದಳಲ್ಲದೇ ಅಷ್ಟೇ ಸರಳವಾಗಿ ಇತರರಿಗೂ ಅರ್ಥೈಸಿ ಹೇಳಿ ಕೊಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಳು. ಹೀಗಾಗಿ ಆಕೆ ತನ್ನ ಹದಿನೆಂಟನೇಯ ವಯಸ್ಸಿನಲ್ಲಿ
ಮನೆಯಲ್ಲಿಯೇ”ಗಣೀತ”ವಿಷಯದ ಟ್ಯೂಷನ್ ಆರಂಭಿಸಿ ವಿದ್ಯಾರ್ಥಿಗಳ ಮನ ಮೆಚ್ಚುವ ಶಿಕ್ಷಕಿಯಾಗಿದ್ದಳು. ದಿನ ಕಳೆದಂತೆ ಇವಳ ಪಾಠ ಮಾಡುವ ಕೌಶಲ್ಯತೆಯ ಕೀರ್ತಿ ಸುತ್ತೆಲ್ಲ ಹರಡಿದಾಗ ಸಾಕಷ್ಟು ವಿದ್ಯಾರ್ಥಿಗಳು ಇವಳ ಪಾಠಕ್ಕೆ ಸೇರತೊಡಗಿದರು. ಅದರಿಂದ ಸಹಜವಾಗಿ ಲಕ್ಷ್ಮೀ ಅನುಗ್ರಹ ವೂ ಆಗತೊಡಗಿತು.
ಈ ನಡುವೆ ಪುಟ್ಟ ಸಂಸಾರ ಸಾಗಿಸುತ್ತಿದ್ದ ಆಕೆಯ ತಂದೆ ಒಂದು ದಿನ ಪಾರ್ಕಿನ್ಸನ್ ಕಾಯಿಲಿಗೆ ತೀವ್ರವಾಗಿ ತುತ್ತಾಗಿ ಹಾಸಿಗೆ ಹಿಡಿದಾಗ ಆ ಕುಟುಂಬಕ್ಕೆ ಸಿಡಿಲು ಬಡಿದಂತಾಗಿತ್ತು. ಸಂಸಾರಕ್ಕಾಗಿ ದುಡಿಯುತ್ತಿದ್ದ ಯಜಮಾನ ಇದ್ದಕ್ಕಿದ್ದಂತೆ ಈ ರೀತಿ ಮಲಗಿದರೆ ಮುಂದೆ ಹೇಗೆ, ಏನು ಎನ್ನುವುದು ಎಲ್ಲ ಕತ್ತಲುಮಯ ವಾದಂತಾಗಿತ್ತು. ಅದೊಂದು ದಿನ ಆಕೆಯ ತಾಯಿ, ತನ್ನ ಪತಿಯ ಹಾಸಿಗೆ ಬಳಿ ಕುಳಿತು ಕಣ್ಢೀರಿಡುತ್ತಿದ್ದಾಗ, ಅಲ್ಲಿಗೆ ತೆವಳುತ್ತ ಬಂದ ಅರುಣಾ ತಾಯಿಯ ಭುಜ ಮುಟ್ಟುತ”ಅಮ್ಮಾ.. ಹೆದರಬೇಡ ನಾನಿದ್ದೇನೆ, ಇನ್ನು ಮುಂದೆ ಸಂಸಾರ ಸಾಗಿಸುವ
ಹೊಣೆ ನನ್ನದು”ಎನ್ನುವ ಮಾತನ್ನು ಹೃದಯಾಂತರಾಳದಿಂದ ನುಡಿದಾಗ
ದಂಪತಿಗಳಿಬ್ಬರಿಗೂ ಕತ್ತಲುಮಯವಾಗಿದ್ದ ತಮ್ಮ ಬಾಳಲ್ಲಿ ಮತ್ತೆ ಅರುಣೋದಯ
ವಾದಂತೆ ಎನಿಸದೇ ಇರಲಿಲ್ಲ.
