ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ.18 ರಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ಜಾತ್ರೆಯ 3 ನೇ ದಿನವಾದ ಮಂಗಳವಾರ ಜಾತ್ರೆ ಅಂಗವಾಗಿ ಜರುಗಿದ ಭಾರ ಎತ್ತುವ ಸ್ಪರ್ಧೆ ಹಾಗೂ ಪ್ರಸಿದ್ದ ಮಲ್ಲರ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತಿತ್ತು.
ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಭಾರ ಎತ್ತುವ ಸ್ಪರ್ಧಿಗಳು ಹಾಗೂ ಕುಸ್ತಿ ಪಟುಗಳು ಭಾಗವಹಿಸಿ ಪಂದ್ಯಾವಳಿಗೆ ಮೆರಗು ತಂದಿದ್ದರು.
ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಟುಗಳು 20 ಕೆ.ಜಿ. ಇಂದ 188 ಕೆ.ಜಿಯ ವರೆಗಿನ ಸಾಣಿ ಕಲ್ಲು ಹಾಗೂ ಗುಂಡು ಕಲ್ಲುಗಳನ್ನು ಅವರವರ ಸಾಮರ್ಥ್ಯಕ್ಕನುಸಾರವಾಗಿ ಕಲ್ಲುಗಳನ್ನು ಎತ್ತುಂತಿದ್ದಂತೆ ನೋಡುಗರ ಮೈ ನವರೇಳಿಸಿತು.
ಇನ್ನು 200 ಕೆ.ಜಿ. ಭಾರದ ಎಮ್.ಸ್ಯಾಂಡ್ ಚೀಲ, ಹಾಗೂ 100 ಕೆ.ಜಿ. ಭಾರದ ಜೋಳದ ಚೀಲವನ್ನು ಪಟುಗಳು ಎತ್ತಿ ನೋಡುಗರನ್ನು ಮನರಂಜಿಸಿದರು.
ಪ್ರಸಿದ್ಧ ಮಲ್ಲರ ಕುಸ್ತಿ ಸ್ಪರ್ಧೆಯಲ್ಲಿ ದೇಹದಾರ್ಡ್ಯ ಕಟ್ಟುಮಸ್ತು ಹೊಂದಿದ್ದ ಪೈಲ್ವಾನರು ಎದುರಾಳಿಗಳನ್ನು ಸೆಣಸುತ್ತಿರುವುದನ್ನು ನೋಡುತ್ತಿದ್ದ ಕುಸ್ತಿ ಪ್ರಿಯರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರುದುಂಬಿಸಿದರು. ಕುಸ್ತಿ ಪಟುಗಳು ಎದುರಾಳಿಗಳೊಂದಿಗೆ ಸೆಣಸಾಡುವಾಗ ಹಾಕುತ್ತಿದ್ದ ತಂತ್ರ-ಪ್ರತಿ ತಂತ್ರಗಳು, ಅವರು ಹಾಕುತ್ತಿದ್ದ ಬಿಗಿ ಪಟ್ಟಿಗೆ ನೋಡುಗರನ್ನು ಮನರಂಜಿಸಿದವು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ಕುಸ್ತಿ ಪಟುಗಳಿಗೆ 5000 ಸಾವಿರದಿಂದ ರಿಂದ 71 ಸಾವಿರದವರೆಗೆ ಬಹುಮಾನ ನೀಡಲಾಯಿತು.

ಕುಸ್ತಿ ಪಟು ಹಾಗೂ ಕುಸ್ತಿ ಪ್ರೀಯ ಸ್ಥಳೀಯ ಪಟ್ಟಣ ಪಂಚಾಯತಿ ಸದಸ್ಯ ಶ್ರೀಕಾಂತ ಗಂಟಗಲ್ಲಿ ಕಳೆದ ವರ್ಷ ತಮ್ಮ ಸ್ವಂತ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕುಸ್ತಿ ಮೈದಾನವನ್ನು ಈ ವರ್ಷ ಕೂಡಾ ಒಂದು ಲಕ್ಷ ರೂಪಾಯಿ ಹಣ ಖರ್ಚುಮಾಡಿ ಕುಸ್ತಿ ಆಡಲಿಕ್ಕೆ ಮೈದಾನ ಸಿದ್ದಪಡಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಕುಸ್ತಿ ಪಂದ್ಯಾವಳಿಯಲ್ಲಿ ಬಿ.ಜೆ.ಪಿ. ಮುಖಂಡ ಸಂಜು ಐಹೊಳ್ಳಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಪ.ಪಂ. ಉಪಾಧ್ಯಕ್ಷ ಇಲಾಹಿ ನದಾಫ, ಪ.ಪಂ.ಸಿಓ ಬಿಕೆ ತಾವಸೆ, ಪ.ಪಂ. ಸದಸ್ಯರಾದ ವಾಸಿಮ್ ಮುಲ್ಲಾ, ಚೇತನ ನೀರಾಳೆ, ಶ್ರೀಕಾಂತ ಗಂಟಗಲಿ, ಇಬ್ರಾಹಿಂ ಸೌದಾಗಾರ, ಚಂದ್ರಕಾಂತ ಕಲಮನಿ, ಪ್ರಕಾಶಗೌಡ ಪಾಟೀಲ, ಸೇರಿದಂತೆ ಪ.ಪಂ.ಎಲ್ಲ ಸದಸ್ಯರು, ಮುಖಂಡರಾದ ರಾಮ ಅವಟಿ, ಮಹಾದೇವ ಯಂಕಂಚಿ, ನೂರಾರು ರೈತರು, ಯುವಕರು, ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಪಾವಲೆ ಹಾಗೂ ಎಲ್ಲ ಸದಸ್ಯರು ಇದ್ದರು.

