ಕಬಿನಿ ಜಲಾಶಯದೊಳಗೆ ಅಡಗಿದೆಯಾ ರಹಸ್ಯ? | ಅಂದು ಕಿತ್ತೂರು, ಇಂದು ಯಾವ ಊರು ಪತ್ತೆ?
ಉದಯರಶ್ಮಿ ದಿನಪತ್ರಿಕೆ
ವರದಿ: ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ: ಮಳೆಗಾಲದಲ್ಲಿ ನೀರಿನಿಂದ ತುಂಬಿ ತುಳುಕುವ ಜಲಾಶಯ ನೋಡುವುದೇ ಚೆಂದ. ಜಲಾಶಯ ಭರ್ತಿಗೆ ಇನ್ನು ಎರಡು-ಮೂರು ಅಡಿ ಬಾಕಿ ಇದ್ದಾಗ ರೈತರು ಮತ್ತು ಸ್ಥಳೀಯರು ಸಂತಸ ಪಡುತ್ತಾರೆ, ಏಕೆಂದರೆ ಇದು ನೀರಾವರಿ ಮತ್ತು ಕುಡಿಯುವ ನೀರಿನ ಭರವಸೆ ನೀಡುತ್ತದೆ. ನಾಡಿನ ಸಮೃದ್ಧಿಯ ಸಂಕೇತ ಪ್ರತಿಬಿಂಬಿಸುತ್ತೆ. ಆದರೆ ಕೆಲವೊಮ್ಮೆ ಮಳೆಯ ಕೊರತೆಯಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಜಲಾಶಯ ಖಾಲಿಯಾಗುತ್ತಾ ಹೋಗುತ್ತಿದ್ದಂತೆಯೇ ಜಲಾಶಯ ತನ್ನೊಡಲಲ್ಲಿ ಹುದುಗಿಟ್ಟ ರಹಸ್ಯವನ್ನು ಹೊರಹಾಕಿ ಬಿಡುತ್ತದೆ. ಈ ವೇಳೆ ಕಂಡು ಬರುವ ದೃಶ್ಯಗಳು ವಿಜ್ಞಾನ ಲೋಕವನ್ನೇ ವಿಸ್ಮಯಗೊಳಿಸುತ್ತೆ.
ಕೆಆರ್ ಎಸ್ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಇನ್ನಿತರ ಪಳೆಯುಳಿಕೆಗಳು ಪತ್ತೆಯಾಗುತ್ತೆ. ಅದೇ ರೀತಿ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತ ಹೋದರೆ ಕಂಡು ಕೇಳರಿಯದ ಅಚ್ಚರಿಗಳು ಬೆಳಕಿಗೆ ಬರುತ್ತವೆ. 2013 ಮತ್ತು 2016ರಲ್ಲಿ ಮಳೆ ಕೊರತೆಯಿಂದಾಗಿ ಕಬಿನಿ ಜಲಾಶಯದಲ್ಲಿ ನೀರು ಖಾಲಿಯಾಗಿತ್ತು. ಈ ವೇಳೆ ಹಿನ್ನೀರಿನಲ್ಲಿ ಕಂಡು ಬಂದಿದ್ದ ದೃಶ್ಯಗಳು ಅಚ್ಚರಿಯನ್ನುಂಟು ಮಾಡಿದ್ದವು.
ಜಲಾಶಯದಲ್ಲಿ ಮುಚ್ಚಿಹೋಗಿದ್ದ ಊರು ಯಾವುದು?
2013ರಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇವಾಲಯಗಳು ಪ್ರತ್ಯಕ್ಷವಾಗಿದ್ದವು. ಇದರ ಇತಿಹಾಸ ಕೆದಕಿದಾಗ ಜಲಾಶಯದ ನೀರಿನಲ್ಲಿ ಹುದುಗಿಹೋಗಿದ್ದ ಊರು ಪತ್ತೆಯಾಗಿತ್ತು. ಈ ಎರಡು ದೇಗುಲಗಳಿದ್ದ ಆ ಊರೇ ಕಿತ್ತೂರು. ಇಲ್ಲಿರುವ ಮಾಂಕಾಳಮ್ಮ ದೇವಿಯು ವೈಷ್ಣವ ದೇವತೆಯಾಗಿದ್ದು, ಕೇರಳದಿಂದ ಬಂದು ಕಿತ್ತೂರಿನಲ್ಲಿ ನೆಲೆಸಿದಳು ಎಂದು ಹೇಳಲಾಗಿದೆ. ಮೊದಲು ಈ ಊರು ಕೀರ್ತಿಪುರವಾಗಿತ್ತಂತೆ. ನಂತರ ಇದು ಕಿತ್ತೂರು ಆಯಿತೆಂಬ ಮಾತುಗಳಿವೆ. ಅಂದಿನ ಕಾಲದಲ್ಲಿ ಕಿತ್ತೂರು ಸಂಪದ್ಭರಿತ ಗ್ರಾಮವಾಗಿತ್ತಂತೆ. ಇಲ್ಲಿನ ಸಾಮಂತರು ಹತ್ತೂರು ಕೊಟ್ಟರೂ ಕಿತ್ತೂರು ಕೊಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಶ್ರೀಮಂತ ಗ್ರಾಮವಾಗಿತ್ತು. ನಂತರ ಕಿತ್ತೂರು ಮೈಸೂರಿನ ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿರುವ ದೇಗುಲಗಳನ್ನು ಆಗಿನ ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ.
ಪರಿವಾರ ನಾಯಕರ ಆರಾಧ್ಯ ದೇವತೆ ಯಾರು?
ಮಾಂಕಾಳಮ್ಮ ಮತ್ತು ಭವಾನಿ ಶಂಕರ ಸೇರಿದಂತೆ ಸಪ್ತ ಮಾತ್ರಿಕೆಯರಾದ ಅಕ್ಕ, ತಂಗಿಯರ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಗಣಪತಿ, ಭೈರವ ದೇವರಿದ್ದು, ಈ ಏಳು ಗದ್ದುಗೆಗಳನ್ನು ಏಳು ಹೆಡೆಯ ಸರ್ಪಾಕೃತಿಯಲ್ಲಿ ನಿರ್ಮಿಸಲಾಗಿತ್ತು. ಈ ದೇವಿ ಪರಿವಾರ ನಾಯಕರ ಆರಾಧ್ಯ ದೇವತೆಯಾಗಿದ್ದು, ಜಲಾಶಯ ನಿರ್ಮಾಣದ ವೇಳೆ ಈ ದೇವಾಲಯದ ಪುನರ್‌ನಿರ್ಮಾಣ ಅಣೆಕಟ್ಟೆಯ ಹತ್ತಿರದಲ್ಲಿರುವ ಬಸಾಪುರದಲ್ಲಿ ಮಾಡಲಾಗಿದೆ. ಇನ್ನು ಮಾಂಕಾಳಮ್ಮ ದೇವಸ್ಥಾನದಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿ ಭವಾನಿ ಶಂಕರ ದೇವಾಲಯವಿದೆ. ದೇವಾಲಯ ತೆರವು ವೇಳೆ ಈಶ್ವರ ಲಿಂಗ, ಬಸವ, ಶೃಂಗಿ ನಾಗದೇವತೆಗಳ ಮೂರ್ತಿ ಭಿನ್ನವಾಗಿವೆ. ಆದ್ದರಿಂದ ಪೂಜೆಗೆ ಅರ್ಹವಲ್ಲ ಎಂದು ಅವುಗಳನ್ನು ಅಲ್ಲಿಯೇ ಬಿಡಲಾಗಿದೆ. ಅವು ಈಗ ಜಲಾಶಯದಲ್ಲಿ ಮುಳುಗಡೆಯಾಗಿದ್ದು, ನೀರು ಸಂಪೂರ್ಣ ಇಳಿಕೆಯಾದಾಗ ಮಾತ್ರ ದರ್ಶನ ನೀಡುತ್ತವೆ.
ಹೀಗೆಯೇ ಮಳೆ ಬಾರದೆ ಹೋದರೆ ಮತ್ತೊಮ್ಮೆ ಹುದುಗಿಹೋಗಿರುವ ಊರನ್ನು ನೋಡಬಹುದೇನೋ. ಅವಾಗ ಇನ್ಯಾವ ದೇವರ ವಿಗ್ರಹಗಳು ಪತ್ತೆಯಾಗಿ ಮತ್ಯಾವ ಊರು ಗೋಚರಿಸುತ್ತೋ ಗೊತ್ತಿಲ್ಲ. ಸದ್ಯ ಅಂತಹ ಪರಿಸ್ಥಿತಿ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನ ಜನರಿಗೆ ಬಾರದಿರಲಿ. ಮಳೆ ಬಂದು ಜಲಾಶಯ ಭರ್ತಿಯಾಗಲಿ, ರೈತರ ಮುಖದಲ್ಲಿ ಮಂದಹಾಸ ಕಂಡುಬರಲಿ. ಇದಕ್ಕೆಲ್ಲ ವರುಣ ಕೃಪೆ ತೋರಬೇಕಷ್ಟೆ.

